ನವದೆಹಲಿ, ಜು.03(DaijiworldNews/AA): ಲೋಕಸಭೆ ಚುನಾವಣೆಗೆ ಜೈಲಿನಿಂದಲೇ ಸ್ಪರ್ಧಿಸಿ ಗೆಲುವು ಸಾಧಿಸಿ ಸಂಸದರಾಗಿರುವ ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತ್ ಪಾಲ್ ಸಿಂಗ್ಗೆ ನಾಲ್ಕು ದಿನಗಳ ಪೆರೋಲ್ ದೊರೆತಿದೆ.
ಜೈಲಿನಿಂದಲೇ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿರುವ ಅಮೃತಪಾಲ್ ಸಿಂಗ್ ಪ್ರಮಾಣವಚನ ಸ್ವೀಕರಿಸಿಲ್ಲ. ಹೀಗಾಗಿ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ಕಲ್ಪಿಸಬೇಕೆಂದು ಕೋರಿ ಅಮೃತ್ಪಾಲ್ ಸಿಂಗ್ ಕೋರ್ಟ್ ಮೆಟ್ಟಿಲೇರಿದ್ದರು. ಅವರ ಮನವಿಯನ್ನು ಪುರಸ್ಕರಿಸಿರುವ ಕೋರ್ಟ್ ಪೆರೋಲ್ ನೀಡಿದ್ದು, ಅವರು ಜುಲೈ 5ರಂದು ಅಸ್ಸಾಂನ ದಿಬ್ರುಗರ್ ಜೈಲಿನಿಂದ ಹೊರಬರಲಿದ್ದಾರೆ.
ಪೆರೋಲ್ ಮೇಲೆ ಬಿಡುಗಡೆ ಆಗಲಿರುವ ಅಮೃತ್ಪಾಲ್ ಸಿಂಗ್ ಅವರು ಜು.5ರಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆ ಇದೆ. ಇನ್ನು ಅಮೃತ್ ಪಾಲ್ ಸಿಂಗ್ ಖಡೂರ್ ಸಾಹೀಬ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಕಾಂಗ್ರೆಸ್ ಅಭ್ಯರ್ಥಿ ಕುಲ್ಬೀರ್ ಸಿಂಗ್ ವಿರುದ್ಧ ಬರೋಬ್ಬರಿ 2 ಲಕ್ಷ ಮತಗಳ ಅಂತರದಲ್ಲಿ ಭಾರೀ ಗೆಲುವು ಸಾಧಿಸಿದ್ದರು.