ಬೆಂಗಳೂರು, ಜು 04 (DaijiworldNews/ AK): ಪೋಕ್ಸೋ ಕೇಸ್ನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಬೆಂಗಳೂರಿನ 1ನೇ ತ್ವರಿತಗತಿಯ ಕೋರ್ಟ್ ಸಮನ್ಸ್ ನೀಡಿದೆ.
ಆರೋಪಪಟ್ಟಿಯನ್ನು ವಿಚಾರಣೆಗೆ ಪರಿಗಣಿಸಿದ ಕೋರ್ಟ್, ಜುಲೈ 15ರಂದು ಖುದ್ದಾಗಿ ಕೋರ್ಟ್ಗೆ ಹಾಜರಾಗುವಂತೆ ಬಿಎಸ್ವೈ ಹಾಗೂ ಇತರೆ ಆರೋಪಿಗಳಿಗೆ ಸಮನ್ಸ್ ನೀಡಿದೆ.
ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ನೀಡಿದ್ದಾರೆ ಎಂಬ ಆರೋಪದ ಮೇಲೆ ಸದಾಶಿವನಗರ ಠಾಣೆಯಲ್ಲಿ ಬಿಎಸ್ವೈ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ನೀಡಿತ್ತು. ತನಿಖೆಗೆ ಹಾಜರಾಗುವಂತೆ ಬಿಎಸ್ವೈಗೆ ನೋಟಿಸ್ ಕೊಟ್ಟಿದ್ದರಿಂದ ಅವರು ಕಾಲಾವಕಾಶ ಕೇಳಿದ್ದರು. ಬಳಿಕ ತನಿಖೆಗೆ ಹಾಜರಾಗಿಲ್ಲ ಎಂದು ಸಿಐಡಿ ಅಧಿಕಾರಿಗಳು, ಅವರ ಬಂಧನಕ್ಕೆ ಅರೆಸ್ಟ್ ವಾರೆಂಟ್ ಪಡೆದಿದ್ದರು. ನಂತರ ಮಾಜಿ ಸಿಎಂ ಮಧ್ಯಂತರ ಜಾಮೀನು ಪಡೆದಿದ್ದರು.
ಜಾಮೀನು ಪಡೆದ ಬಳಿಕ ಕೋರ್ಟ್ ನಿರ್ದೇಶನದಂತೆ ಸಿಐಡಿ ಅಧಿಕಾರಿಗಳ ಎದುರು ಬಿಎಸ್ವೈ ತನಿಖೆಗೆ ಹಾಜರಾಗಿದ್ದರು. ತನಿಖೆ ನಡೆಸಿರುವ ಸಿಐಡಿ ಅಧಿಕಾರಿಗಳು ಈ ಹಿಂದೆ ಕೋರ್ಟ್ಗೆ 750 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.