ಬೆಂಗಳೂರು, ಜು 04 (DaijiworldNews/ AK): ಬಿಜೆಪಿ ಸಂವಿಧಾನ ಬದಲಾವಣೆ ಮಾಡಲಿದೆ ಎಂದು ಚುನಾವಣೆ ವೇಳೆ ಸುಳ್ಳು ಪ್ರಚಾರ ಮಾಡಲಾಗಿತ್ತು. ಸ್ವಾರ್ಥಕ್ಕಾಗಿ ಸಂವಿಧಾನವನ್ನು ಬದಲಿಸಿದ, ಸಂವಿಧಾನದ ಹತ್ಯೆ ಮಾಡಿ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪಕ್ಷವು ನಮ್ಮ ವಿರುದ್ಧ ಸುಳ್ಳು ಆರೋಪ ಮಾಡಿತ್ತು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದರು.
ಪ್ರಜಾಪ್ರಭುತ್ವ ಆತಂಕದಲ್ಲಿದೆ ಎಂದು ಸುಳ್ಳು ಮಾಹಿತಿ ಕೊಡಲಾಗಿತ್ತು ಎಂದು ಆಕ್ಷೇಪಿಸಿದರು.ಅರಮನೆ ಮೈದಾನದ ಗೇಟ್ ನಂ.3, ವೈಟ್ ಪೆಟಲ್ಸ್ನಲ್ಲಿ ಇಂದು ಏರ್ಪಡಿಸಿದ ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿಯಲ್ಲಿ ಸಮಾರೋಪ ಭಾಷಣ ಮಾಡಿದರು. ಜನರಲ್ಲಿ ಗೊಂದಲ ಉಂಟು ಮಾಡುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿತ್ತು ಎಂದು ಟೀಕಿಸಿದರು.
1975ರಲ್ಲಿ ತುರ್ತು ಪರಿಸ್ಥಿತಿಯ ಕರಾಳ ದಿನಗಳು, ಮೀಸಾದಡಿ ನಮ್ಮ ನೇತಾರರು, ಕಾರ್ಯಕರ್ತರನ್ನು ಬಂಧಿಸಲಾಗಿತ್ತು ಎಂದು ನೆನಪಿಸಿದರು. ಇದು ಪ್ರಜಾಸತ್ತೆ ಮತ್ತು ಸಂವಿಧಾನದ ಹತ್ಯೆ ಎಂದು ತಿಳಿಸಿದರು.
ಬೆಂಗಳೂರಿನ ಜೈಲಿನಲ್ಲಿ ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ, ಜಾರ್ಜ್ ಫರ್ನಾಂಡಿಸ್ ಮೊದಲಾದವರು ಇದ್ದರು ಎಂದು ವಿವರಿಸಿದರು. ತುರ್ತು ಪರಿಸ್ಥಿತಿಯ ವಿರುದ್ಧ ಭಾರತೀಯ ಜನಸಂಘ ಹೋರಾಡಿ ಪ್ರಜಾಸತ್ತೆಯನ್ನು ಉಳಿಸುವ ಕೆಲಸ ಮಾಡಿದೆ ಎಂದು ಮಾಹಿತಿ ನೀಡಿದರು. ಸಂವಿಧಾನವನ್ನು ಉಳಿಸುವ ಕೆಲಸವೂ ಆಗಿತ್ತು ಎಂದರು. ಪ್ರಜಾತಂತ್ರವು 4 ಸ್ಥಂಭಗಳ ಮೇಲೆ ನಿಂತಿದೆ. ಇವೆಲ್ಲವುಗಳ ಬಗ್ಗೆ ಸಂವಿಧಾನದಲ್ಲಿ ಬರೆಯಲಾಗಿದೆ. ಸಂವಿಧಾನವನ್ನು ಕಡೆಗಣಿಸಿ ಹಲವಾರು ತಿದ್ದುಪಡಿ ಮಾಡಲಾಗಿತ್ತು ಎಂದು ತಿಳಿಸಿದರು.
ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ಮಾಡಲಾಗಿತ್ತು ಎಂದು ಹೇಳಿದರು.ಇಂದಿನ ಯುವಜನರಿಗೆ ತುರ್ತು ಪರಿಸ್ಥಿತಿಯ ಕುರಿತು ಮಾಹಿತಿ ಇಲ್ಲ. ನಾನು ಎಸ್ಸೆಸ್ಸೆಲ್ಸಿ ಓದುತ್ತಿದ್ದೆ. ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡುತ್ತಿದ್ದೆ. ಇದರಿಂದ ಕಡಿಮೆ ಅಂಕ ಬಂತು. ಆದ್ದರಿಂದ ನನಗೆ ಎಂಜಿನಿಯರಿಂಗ್ ಕೋರ್ಸ್ ಮಾಡಲಾಗಲಿಲ್ಲ. ಆಗ ನನ್ನ ಕುಟುಂಬದವರು ಆ ಕುರಿತು ಕೋಪಗೊಂಡಿದ್ದರು. ಆದರೆ, ಇದೀಗ ನನಗೆ ಪುರಸ್ಕಾರ ಲಭಿಸಿದೆ. 7 ಡಿಲಿಟ್, 7 ವಿಶ್ವ ಪುರಸ್ಕಾರಗಳು ನನಗೆ ಲಭಿಸಿದೆ ಎಂದು ನೆನಪಿಸಿಕೊಂಡರು.