ನವದೆಹಲಿ, ಮೇ15(Daijiworld News/SS): ದೇಶದ ಬೇರೆ ಬೇರೆ ಭಾಗಗಳಲ್ಲಿ ಉಗ್ರರು ದಾಳಿಗಳನ್ನು ನಡೆಸಲು ಭಾರೀ ಸಂಚು ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಗುಪ್ತಚರ ಇಲಾಖೆಗೆ ಲಭ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಭಾರತದಲ್ಲಿಯೂ ಭಯೋತ್ಪಾದಕರು ದೊಡ್ಡ ಮಟ್ಟದಲ್ಲಿ ದಾಳಿಗಳನ್ನು ನಡೆಸಲು ಪಿತೂರಿ ಮಾಡುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆಗೆ ಮಾಹಿತಿ ಲಭ್ಯವಾಗಿದೆ. ಈಗಾಗಲೇ 3 ಉಗ್ರರು ನೇಪಾಳ ಗಡಿ ಮೂಲಕ ಭಾರತಕ್ಕೆ ನುಸುಳಿದ್ದಾರೆ ಮತ್ತು ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯನ್ನು ತಲುಪಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಉಗ್ರ ಸಂಘಟನೆಯಾದ ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಎಂಬಿ) ಆತ್ಮಾಹುತಿ ದಾಳಿಗೆ ಮಹಿಳೆಗೆ ತರಬೇತಿ ನೀಡಿದ್ದು, ಆಕೆ ಬುದ್ಧ ದೇಗುಲಗಳು ಸೇರಿದಂತೆ ಭಾರತ ಮತ್ತು ಮ್ಯಾನ್ಮಾರ್ಗಳಲ್ಲಿ ಗುರಿಯಾಗಿಸಿ ದಾಳಿ ನಡೆಸಲು ಷಡ್ಯಂತ್ರ ರೂಪಿಸಿದ್ದಾಳೆ ಎಂದು ತಿಳಿದುಬಂದಿದೆ. ಮಾತ್ರವಲ್ಲ, ಈ ಬೆಳವಣಿಗೆಗಳು ಆಗ್ನೇಯ ಏಷ್ಯಾದ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರ ಸಂಘಟನೆ ಕಡೆಯಿಂದಾಗಲಿದೆ ಎಂದು ಗುಪ್ತಚರ ಇಲಾಖೆ ಶಂಕೆ ವ್ಯಕ್ತಪಡಿಸಿದೆ.
ಸಜೀದ್ ಮಿರ್ ಎಂಬ ಉಗ್ರ ನೇಪಾಳದ ಕಾಠ್ಮಂಡುವಿನಿಂದ 3 ವಿದೇಶಿ ಉಗ್ರರನ್ನು ಬಂಡಿಪೋರಾಕ್ಕೆ ಕರೆತಂದಿದ್ದು, ಬಂಡಿಪೋರವು ವಿದೇಶಿ ಉಗ್ರರಿಗೆ ಮುಖ್ಯವಾಗಿ ಲಷ್ಕರ್ ಇ ತೊಯ್ಬಾ ಮತ್ತು ಜೈಶ್ ಇ ಮೊಹಮ್ಮದ್ನಂತ ಉಗ್ರ ಸಂಘಟನೆಗಳಿಗೆ ಸುರಕ್ಷಿತ ತಾಣವಾಗಿದೆ.
ನೇಪಾಳದ ಮೂಲಕ ಉಗ್ರರ ಒಳನುಸುಳುವಿಕೆಯು ಭದ್ರತಾ ಸಂಸ್ಥೆಗಳನ್ನು ತೀವ್ರ ಕಳವಳಕ್ಕೀಡು ಮಾಡಿದ್ದು, 2017 ಮತ್ತು 2018 ರಲ್ಲಿ ಈ ಮಾರ್ಗದಿಂದ ಯಾವುದೇ ಉಗ್ರರ ಒಳನುಸುಳುವಿಕೆ ನಡೆದಿರಲಿಲ್ಲ.