ಹಾಸನ, ಜು. 07(DaijiworldNews/AA): ಇಂದು ಹೊಗಳಿಕೆಯಿಂದ ಎಲ್ಲಾ ರಾಜಯಕೀಯ ಪಕ್ಷಗಳು ಹಾಳಾಗಿ ಹೋಗಿವೆ. ಪಕ್ಷ ರಾಜಕಾರಣ ಹಾಳಾಗಿ, ವ್ಯಕ್ತಿ ರಾಜಕಾರಣ ಮೆರೆಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ತಿಳಿಸಿದ್ದಾರೆ.
ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಹೀಗೆ ವ್ಯಕ್ತಿ ರಾಜಕಾರಣ ಶುರುವಾಗಿದೆ. ದೇಶದಲ್ಲಿ ಈಗ ಪಕ್ಷ ರಾಜಕಾರಣ ಇಲ್ಲದಂತಾಗಿದೆ. ಎಲ್ಲರೂ ಮಾಡುವ ತಪ್ಪನ್ನೇ ನಾನು ಮಾಡಿದ್ರೆ ವಿಶೇಷ ಹೇಗಾಗ್ತೀನಿ? ಹಾಗಾಗಿ ನಾನು ಆ ತಪ್ಪು ನಾನು ಮಾಡೋಕೆ ಹೋಗಲ್ಲ. ಮತ್ತೊಬ್ಬನನ್ನು ಟೀಕೆ ಮಾಡಬೇಕಾದ್ರೆ ಮೊದಲು ನಾನು ಸರಿ ಇರಬೇಕು. ಇದನ್ನ ಎಲ್ಲರೂ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಾದ, ವಿವಾದ, ಪ್ರತಿವಾದ ಟೀಕೆ ಸಹಜ. ಅದು ಇಲ್ಲದೇ ಇದ್ದರೇ ಚಮಚಾಗಿರಿ ಮಾಡಿಕೊಂಡು ಕೂರಬೇಕಾಗುತ್ತದೆ. ಯಾರನ್ನೋ ಮೆಚ್ಚಿಸಲು ನೀನು ಸತ್ಯವಂತ ಎಂದು ಹೇಳೋದು ಎಷ್ಟು ಸರಿ? ಭ್ರಷ್ಟನನ್ನ ಭ್ರಷ್ಟ ಎಂದೇ ಹೇಳಬೇಕು. ಹಾಗೆ ಹೇಳಿದರೆ ವಿಶ್ವನಾಥ್ ಎಲ್ಲರ ಬಗ್ಗೆನು ಮಾತಾಡ್ತಾರೆ ಅಂತಾರೆ. ಜನತಂತ್ರ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿ ಇಲ್ಲದೇ ಬರೀ ಹೊಗಳಿಕೆ ಇದ್ದರೆ ಹೇಗೆ? ಒಂದು ಪಕ್ಷದ ಕಾರ್ಯಕರ್ತರು ನಾಯಕ ಏನೇ ತಪ್ಪು ಮಾಡಿದರೂ ಅವನನ್ನು ಹೊಗಳುತ್ತಾರೆ. ನೀನು ತಪ್ಪು ಮಾಡಿದ್ದೀಯ ಅಂತ ಹೇಳುವುದಿಲ್ಲ. ಹಾಗಾಗಿ ಇಂದು ಪಕ್ಷ ರಾಜಕಾರಣ ಹಾಳಾಗಿದೆ ಎಂದರು.