ಶಿವಮೊಗ್ಗ, ಜು. 08(DaijiworldNews/AA): ಪ್ರತಾಪ್ ಕಾಣೆಯಾದ ತಿಳಿದ ನಂತರ ದಾವಣಗೆರೆ, ಶಿವಮೊಗ್ಗ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದೆ. ಬಳಿಕ ಹೊನ್ನಾಳಿಯಲ್ಲಿ ಜೋಳಕ್ಕೆ ಬಳಸುವ ವಿಷ ಕುಡಿದಿರುವ ವಿಷಯ ತಿಳಿಯಿತು ಎಂದು ಅಳಿಯನ ಆತ್ಮಹತ್ಯೆ ಬಗ್ಗೆ ಮಾಜಿ ಸಚಿವ ಬಿ.ಸಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಮಧ್ಯಾಹ್ನ ಸಹೋದರ ಕರೆ ಮಾಡಿ ಪ್ರತಾಪ್ ಆತ್ಮಹತ್ಯೆ ಬಗ್ಗೆ ಮಾಹಿತಿ ನೀಡಿದ್ದರು. ದಾವಣಗೆರೆಗೆ ರವಾನಿಸಲು ತಿಳಿಸಿದ್ದೆವು. ಆದರೆ ಶಿವಮೊಗ್ಗ ಹತ್ತಿರವೆಂದು ಇಲ್ಲಿನ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಹೇಳಿದರು.
ಮದುವೆಯಾಗಿ 16 ವರ್ಷ ಕಳೆದಿತ್ತು. ಮಕ್ಕಳಾಗದಿರುವ ವಿಚಾರದಲ್ಲಿ ಕೊರಗಿತ್ತು. ಡಿಅಡಿಕ್ಷನ್ ಸೆಂಟರ್ನಲ್ಲಿ 2 ತಿಂಗಳು ಇದ್ದರು. ಅಲ್ಲಿ ಸರಿ ಹೋಗಿದ್ದರು. ರಾಜಕೀಯ ಸೇರಿ ನಮ್ಮ ವ್ಯವಹಾರಗಳನ್ನೆಲ್ಲ ಅವರೆ ನೋಡಿಕೊಳ್ಳುತ್ತಿದ್ದರು. ಕೆರೆಗಳಿಗೆ ಭೇಟಿ ನೀಡಿ ಬರುವಾಗ ವಿಷಯ ತಿಳಿಯಿತು. ನಾಳೆ ಚನ್ನಗಿರಿ ತಾಲೂಕಿನ ಕತ್ತಲಗೆರೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದರು.
ಬಿ.ಸಿ. ಪಾಟೀಲ್ ಅವರ ಮೊದಲ ಪುತ್ರಿ ಸೌಮ್ಯ ಅವರ ಪತಿ ಕೆ.ಜಿ. ಪ್ರತಾಪ್ ಕುಮಾರ್ (42) ಅವರು ಇಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಕಾರು ನಿಲ್ಲಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು.