ಹುಬ್ಬಳ್ಳಿ, ಮೇ15(Daijiworld News/SS): ಅಮಿತ್ ಶಾ ಎಂಬ ವ್ಯಕ್ತಿ ಜೈಲಿಗೆ ಹೋಗಿ ಬಂದು ಬೇಲ್ ಮೇಲೆ ಹೊರಗಿದ್ದಾನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದ್ದಾರೆ.
ಪ್ರಚಾರದ ವೇಳೆ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮಾಡಿದ್ದು ಸಬ್ ಕಾ ಸಾಥ್ ಸಬ್ ಕಾ ವಿಕಾಸ ಅಲ್ಲ. ಸಬ್ ಕಾ ವಿನಾಶ. ಇದು ಬಿಜೆಪಿಯವರ ಕಥೆ ಎಂದು ವ್ಯಂಗ್ಯವಾಡಿದರು.
ಬಿಜೆಪಿಯಲ್ಲಿ ಲಜ್ಜೆಗೆಟ್ಟವರು ಇದ್ದಾರೆ. ಇಂಥವರು ಗೆಲ್ಲಬಾರದು. ಸಿಎಂ ಆಗಬಾರದು. ಆದರೆ, ಸಮಾಜ, ರಾಜ್ಯ ಉಳಿಯುವುದಿಲ್ಲ ಅಮಿತ್ ಶಾ ಎಂಬ ವ್ಯಕ್ತಿ ಜೈಲಿಗೆ ಹೋಗಿ ಬಂದು ಬೇಲ್ ಮೇಲೆ ಹೊರಗಿದ್ದಾನೆ. ಆ ಗಿರಾಕಿ ಈಗ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ . ಅವರಂತೆಯೇ ರಾಜ್ಯದ ಹಲವು ನಾಯಕರು ಜೈಲಿಗೆ ಹೋಗಿ ಬಂದವವರಿದ್ದಾರೆ. ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಲೋಕಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮೋದಿ ನೋಟ್ ಬ್ಯಾನ್ ಪ್ರಕ್ರಿಯೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಅಸಹ್ಯ. ಬಿಜೆಪಿ ದೇಶವನ್ನು ಉದ್ಧರಿಸುವ ಪಕ್ಷ ಅಲ್ಲ. ಅದು ಸಮಾಜ ಒಡೆಯುವ ಪಕ್ಷ. ಇದನ್ನು ಅರಿತು ಮತದಾರ ಹೆಜ್ಜೆ ಹಾಕಬೇಕು ಎಂದು ಹೇಳಿದರು.
ದೇಶದ ಪ್ರಧಾನಿ ಮೋದಿ ತನ್ನ ರಾಜಕೀಯ ಗುರು ಎಲ್.ಕೆ. ಅಡ್ವಾಣಿ ಅವರಿಗೆಯೇ ಏಟು ಕೊಟ್ಟ ವ್ಯಕ್ತಿ. ಅವರು ಎದುರಿಗೆ ಬಂದರೂ ಗೌರವ ಕೊಡುವುದಿಲ್ಲ. ಈಗ ರಾಜೀವಗಾಂಧಿ, ನೆಹರು, ಇಂದಿರಾಗಾಂಧಿ ಬಗ್ಗೆ ಹಗುರವಾಗಿ ಮಾತನಾಡಿ ತಮ್ಮ ವ್ಯಕ್ತಿತ್ವವನ್ನು ತಾವೇ ಕಳೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.