ಚಾಮರಾಜನಗರ, ಜು. 10(DaijiworldNews/AA): ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೇನೇ ಹೇಳಿದರೂ, ಸಾಧನೆಗಳ ಬಗ್ಗೆ ಎಷ್ಟೇ ಕೊಚ್ಚಿಕೊಂಡರೂ ಮತ್ತು ಏನೇ ಬೊಗಳೆ ಬಿಟ್ಟರೂ ಜನ ನೀಡುವ ತೀರ್ಮಾನವೇ ಅಂತಿಮ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ನಡೆದ ಸಂಸದ ಸುನೀಲ್ ಬೋಸ್ ಸತ್ಕಾರ ಸಮಾರಂಭದಲ್ಲಿ ಮಾತಾಡಿದ ಅವರು, ಬಿಜೆಪಿ ನಾಯಕರು ಅಂದುಕೊಂಡಿರುವಂತೆ ಮತದಾರರು ದಡ್ಡರಲ್ಲ. ಅವರು ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ, ಆದರೆ ಅವರನ್ನು ಯಾಮಾರಿಸುವುದು ಸಾಧ್ಯವಿಲ್ಲ ಎಂದು ತಿಳಿಸಿದರು.
ಕಳೆದ ಸಲ ರಾಜ್ಯದಿಂದ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದರು, ಅದರೆ ಅವರಲ್ಲಿ ಯಾರೊಬ್ಬರು ರಾಜ್ಯಕ್ಕೆ ಆಗುತ್ತಿದ್ದ ಅನ್ಯಾಯಗಳ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಲಿಲ್ಲ. ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿದ್ದರೂ ರಾಜ್ಯಕ್ಕೆ ದಕ್ಕಬೇಕಿದ್ದ ಪರಿಹಾರ ನಿಧಿಯ ಬಗ್ಗೆ ಚಕಾರವೆತ್ತಲಿಲ್ಲ. ಅದನ್ನು ಪಡೆಯಲು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಯಿತು. ಸರ್ವೋಚ್ಛ ನ್ಯಾಯಾಲಯ ಛೀಮಾರಿ ಹಾಕಿದ ನಂತರ ಎನ್ ಡಿಆರ್ ಎಫ್ ಪರಿಹಾರ ನಿಧಿ ಬಿಡುಗಡೆ ಮಾಡಿತ್ತು ಎಂದರು.