National
ಅಪ್ರತಿಮ ಸಾಧಕ ಅತೀ ವಂದನೀಯ ಡಾ. ಅಲ್ಫೋನ್ಸ್ ಮಥಾಯಸ್
- Wed, Jul 10 2024 09:03:49 PM
-
ಬೆಂಗಳೂರು, ಜು. 10(DaijiworldNews/AA): 1963ರ ನವೆಂಬರ 16ರಂದು ಕಥೋಲಿಕ ಜಾಗತಿಕ ಧರ್ಮಸಭೆಯ ಜಗದ್ಗುರು ಪೋಪ್ ಆರನೇ ಪಾಲ್ ಅವರು ತಮ್ಮ ‘ಇಂದಿಯೆ ರೀಜಿನಿಯೊಸ್’ ವಿಶ್ವಪತ್ರದ ಮೂಲಕ ಮೈಸೂರು ಧರ್ಮಕ್ಷೇತ್ರದಿಂದ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಕಂದಾಯ ಜಿಲ್ಲೆಗಳನ್ನು ಬೇರ್ಪಡಿಸಿ ನೂತನ ಚಿಕ್ಕಮಗಳೂರು ಧರ್ಮಕ್ಷೇತ್ರ ಸ್ಥಾಪನೆ ಮತ್ತು ನೂತನ ಧರ್ಮಕ್ಷೇತ್ರಕ್ಕೆ ಸ್ಥಾಪಕ ಧರ್ಮಾಧ್ಯಕ್ಷರಾಗಿ ಮಂಗಳೂರು ಧರ್ಮಕ್ಷೇತ್ರದ ಯಾಜಕರಾಗಿದ್ದ ವಂದನೀಯ ಫಾದರ್ ಡಾ. ಅಲ್ಫೋನ್ಸ್ ಮಥಾಯಸ್ ಅವರ ನೇಮಕವನ್ನು ಮಾಡಿದರು. 1964ರ ಫೆಬ್ರವರಿ 5ರಂದು ಚಿಕ್ಕಮಗಳೂರಿನ ಸಂತ ಜೋಸೆಫರ ಪ್ರಧಾನಾಲಯದಲ್ಲಿ ಭಾರತದ ವೆಟಿಕನ್ ಉಪರಾಯಭಾರಿ ಘನತೆವೆತ್ತ ಮಹಾ ಧರ್ಮಾಧ್ಯಕ್ಷ ಜೇಮ್ಸ್ ರೊನಾಲ್ಡ್ ನೊಕ್ಸ್ ಅವರು ಕೆನನ್ ರೀತ್ಯ ಚಿಕ್ಕಮಗಳೂರು ಧರ್ಮಕ್ಷೇತ್ರವನ್ನು ಪ್ರತಿಷ್ಟಾಪಿಸಿದರು. ಹಾಗೂ ಅತೀ ವಂದನೀಯ ಡಾ. ಅಲ್ಫೋನ್ಸ್ ಮಥಾಯಸ್ ಅವರನ್ನು ಧರ್ಮಾಧ್ಯಕ್ಷರನ್ನಾಗಿ ಅಭಿಷೇಕಿಸಿ ಚಿಕ್ಕಮಗಳೂರು ಧರ್ಮಕ್ಷೇತ್ರದ ಸ್ಥಾಪಕ ಧರ್ಮಾಧ್ಯಕ್ಷರಾಗಿ ಸೇವಾ ದೀಕ್ಷೆ ನೀಡಿದರು.
ಈಗ ಆ ಘಟನೆಗಳಿಗೆ ಅರವತ್ತು ವರ್ಷಗಳು ತುಂಬಿದ್ದು, 2024ರ ಫೆಬ್ರವರಿ 5ರಂದು ವಜ್ರೋತ್ಸವ ಸಂಭ್ರಮ. ಚಿಕ್ಕಮಗಳೂರು ಧರ್ಮಕ್ಷೇತ್ರದ ಸ್ಥಾಪಕ ಧರ್ಮಾಧ್ಯಕ್ಷರಾಗಿ ನಿಯುಕ್ತಿಗೊಂಡಾಗ ಅತೀ ವಂದನೀಯ ಅಲ್ಫೋನ್ಸ್ ಮಥಾಯಸ್ ಅವರಿಗೆ ಕೇವಲ 35ರ ಹರೆಯ. ಬಹುಷ: ಭಾರತದ ಆಗಿನ ಅತೀ ಕಿರಿಯ ಧರ್ಮಾಧ್ಯಕ್ಷರಲ್ಲಿ ಓರ್ವರು. ಆ ಸಂದರ್ಭದಲ್ಲಿ, ಮಂಗಳೂರು ಧರ್ಮಕ್ಷೇತ್ರದ ಧರ್ಮಗುರುವಾಗಿ ಅವರು ಯಾಜಕಾಭಿಷೇಕಗೊಂಡು ಕೇವಲ 9 ವರ್ಷಗಳಾಗಿದ್ದವು.
ಅತೀ ವಂದನೀಯ ಅಲ್ಫೋನ್ಸ್ ಮಥಾಯಸ್ ಚಿಕ್ಕಮಗಳೂರು ಧರ್ಮಕ್ಷೇತ್ರದ ಸ್ಥಾಪಕ ಧರ್ಮಾಧ್ಯಕ್ಷರಾಗಿ 23 ವರ್ಷಗಳ ಸೇವೆಯ ಬಳಿಕ ಬೆಂಗಳೂರು ಮಹಾ ಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾಗಿ ಪದೋನ್ನತಿ ಹೊಂದಿ ಅಲ್ಲಿ 12 ವರ್ಷ ಸೇವೆ ಸಲ್ಲಿಸಿದರು.
ತಮ್ಮ ಜೀವಿತದ 95 ಸಂವತ್ಸರಗಳನ್ನು ಪೂರ್ತಿಗೊಳಿಸಿರುವ ಅತೀ ವಂದನೀಯ ಡಾ. ಅಲ್ಫೋನ್ಸ್ ಮಥಾಯಸ್ ಅವರು ತಮ್ಮ ಯಾಜಕಾಭಿಷೇಕದ 70ನೇ ವರ್ಷದಲ್ಲಿದ್ದಾರೆ. ಧರ್ಮಾಧ್ಯಕ್ಷರಾಗಿ ಅಭಿಷೇಕಗೊಂಡು 60 ವರ್ಷ ಮತ್ತು ಬೆಂಗಳೂರು ಮಹಾ ಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾಗಿ ನಿಯುಕ್ತಿಗೊಂಡು 37 ವರ್ಷಗಳನ್ನು ಪೂರೈಸಿದ್ದಾರೆ. ಈ ಎಲ್ಲಾ ಘನಸ್ತಿಕೆಗಳೊಂದಿಗೆ ಅವರು ಪ್ರಪಂಚದ ಕಥೋಲಿಕ ಧರ್ಮಸಭೆಯ ಅತೀ ಹಿರಿಯ ಧರ್ಮಾಧ್ಯಕ್ಷ / ಮಹಾ ಧರ್ಮಾಧ್ಯಕ್ಷರುಗಳಲ್ಲಿ ಓರ್ವರಾಗಿದ್ದಾರೆ. ಭಾರತದ ಲ್ಯಾಟಿನ್ ರೀತಿಯ ಕಥೋಲಿಕ ಧರ್ಮಸಭೆಯ ಅತೀ ಹಿರಿಯ ಧರ್ಮಾಧ್ಯಕ್ಷ / ಮಹಾ ಧರ್ಮಾಧ್ಯಕ್ಷರಾಗಿದ್ದಾರೆ ಎಂದು ಅರಿಕೆ ಮಾಡಲು ಹೆಮ್ಮೆಯೆನಿಸುತ್ತದೆ. ಪ್ರಸ್ತುತ 25 ವರ್ಷಗಳಿಂದ ಅವರು ಬೆಂಗಳೂರಿನ ಸಂತ ಜಾನರ ರಾಷ್ಟ್ರೀಯ ಆರೋಗ್ಯ ವಿಜ್ಞಾನಗಳ ಸಂಸ್ಥೆಯ ವಿಯಾನ್ನಿ ಹೌಸ್ನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.
ಇಂತಹ ಅಪರೂಪದಲ್ಲಿ ಅಪರೂಪದ ಘಟನೆಗಳ ಈ ಸಂದರ್ಭದಲ್ಲಿ ನಾನು (ಈ ಬರಹಗಾರ) ಅವರನ್ನು ಅಭಿನಂದಿಸುತ್ತೇನೆ. ದೇವರು ಉತ್ತಮ ಆರೊಗ್ಯ ಮತ್ತು ನೆಮ್ಮದಿಯನ್ನು ಕರುಣಿಸಿ ಅವರನ್ನು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
ಕುಟುಂಬ ಹಿನ್ನೆಲೆ, ಜನನ ಮತ್ತು ಮೆಟ್ರಿಕ್ಯುಲೇಶನ್ವರೆಗಿನ ಜೀವನ:
ಆಗಿನ ಸೌತ್ ಕೆನರಾ (ದಕ್ಷಿಣ ಕನ್ನಡ) ಜಿಲ್ಲೆಯ ಇನ್ನಂಜೆ ಗ್ರಾಮದ ಉಂಡಾರು ಎಂಬ ಪುಟ್ಟ ಹಳ್ಳಿಯಲ್ಲಿ (1997ರಿಂದೀಚೆಗೆ ಇದು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿದೆ) ಜನಿಸಿದರು. ಈ ಪಾಳ್ಯ ಮಂಗಳೂರು ಧರ್ಮಕ್ಷೇತ್ರಕ್ಕೊಳಪಟ್ಟ ಸಂತ ಜಾನ್ ಸುವಾರ್ತೆಗಾರರಿಗೆ ಸಮರ್ಪಿಸಲ್ಪಟ್ಟ ಧರ್ಮಕೇಂದ್ರದ (ಪ್ಯಾರಿಶ್) ಅಧೀನದಲ್ಲಿದೆ. 1922ರಲ್ಲಿ ಸ್ಥಾಪನೆಯಾಗಿರುವ ಈ ಧರ್ಮಕೇಂದ್ರ ಶಂಕರಪುರ ಎಂಬ ಊರಿನಲ್ಲಿರುವುದಾದರೂ ಧರ್ಮಕೇಂದ್ರವಿರುವ ಗ್ರಾಮದ ಹೆಸರಿನಲ್ಲಿ ಇದನ್ನು ಪಾಂಗಾಳ ಧರ್ಮಕೇಂದ್ರ (ಕೊಂಕಣಿಯಲ್ಲಿ ಪಾಂಗ್ಳಾ ಫಿರ್ಗಜ್) ಎಂದೇ ಕರೆಯಲಾಗುತ್ತದೆ. 2012ರಲ್ಲಿ ನೂತನ ಉಡುಪಿ ಧರ್ಮಕ್ಷೇತ್ರ ಸ್ಥಾಪನೆಯಾಗಿದೆ. ಹಾಗಾಗಿ ಸಂತ ಜಾನ್ ಸುವಾರ್ತೆಗಾರರಿಗೆ ಸಮರ್ಪಿಸಲ್ಪಟ್ಟ ಧರ್ಮಕೇಂದ್ರವು ಉಡುಪಿ ಧರ್ಮಕ್ಷೇತ್ರಕ್ಕೊಳಪಟ್ಟಿದೆ.ಭತ್ತದ ಮತ್ತು ತರಕಾರಿ ಬೇಸಾಯದ ಮೂಲಕ ಜೀವನ ಸಾಗಿಸುತ್ತಿದ್ದ ಪಾಂಗಾಳದ ಭಕ್ತಾದಿ ಜನ ಆರ್ಥಿಕವಾಗಿ ಬಡವರಾಗಿದ್ದರೂ ಕೆಥೋಲಿಕ ಧಾರ್ಮಿಕ ವಿಶ್ವಾಸದಲ್ಲಿ ಅಚಲರಾಗಿದ್ದರು. ಅಂತಹ ಹಿನ್ನೆಲೆಯ ಶ್ರೀ ದಿಯೋಗ್ ಮಥಾಯಸ್ ಮತ್ತು ಶ್ರೀಮತಿ ಫಿಲೊಮಿನಾ ಡಿಸೋಜಾ ದಂಪತಿಗಳಿಗೆ ನಾಲ್ಕನೇ ಮಗುವಿನ ಜನನವಾಯಿತು. ಕ್ರಿಸ್ತ ಜ್ಞಾನಸ್ನಾನದ (ಬ್ಯಾಪ್ಟಿಸಂ) ಸಂದರ್ಭದಲ್ಲಿ ಮಗುವಿಗೆ ಅಲ್ಫೋನ್ಸಸ್ ಎನ್ನುವ ಹೆಸರನ್ನಿಡಲಾಯಿತು. ದಿಯೋಗ್ - ಫಿಲೊಮಿನಾ ದಂಪತಿಗೆ ಒಟ್ಟು ಐವರು ಮಕ್ಕಳು. (ಉಳಿದಿಬ್ಬರು ಪುತ್ರರು - ಫ್ರಾನ್ಸಿಸ್ ಮತ್ತು ಆ್ಯಂಟನಿ. ಇಬ್ಬರು ಪುತ್ರಿಯರು - ಸ್ಟೆಲ್ಲಾ ಮತ್ತು ಮೊನಿಕಾ).
ಪಾಂಗಾಳ ಧರ್ಮಕೇಂದ್ರದ ಭಕ್ತಾಧಿಗಳ ಮತ್ತು ಊರ ಜನರ ಬಡತನವನ್ನು ಹೋಗಲಾಡಿಸುವ ಉದ್ದೇಶದಿಂದ ಧರ್ಮಕೇಂದ್ರದ ಪ್ರಥಮ ವಿಚಾರಣಾ ಗುರು (ಪ್ಯಾರಿಶ್ ಪ್ರೀಸ್ಟ್) ಆಗಿದ್ದ ವಂದನೀಯ ಫಾದರ್ ಬೇಸಿಲ್ ಸಾಲ್ವದೊರ್ ಪೆರಿಸ್ (ವಿಶ್ರಾಂತ ಮಹಾಧರ್ಮಾಧ್ಯಕ್ಷರ ದೈವಿಕ ಕರೆಯ ಪ್ರೇರಕರೂ ಹೌದು) ಅವರು 1936ನೇ ಇಸವಿಯಲ್ಲಿ ಪಾಂಗಾಳದಿಂದ 75 ಮೈಲು ದೂರದ ನೋರ್ಥ್ ಕೆನರಾ (ಉತ್ತರ ಕನ್ನಡ) ಜಿಲ್ಲೆಯ ಭಟ್ಕಳದಿಂದ ಸುವಾಸನೆಭರಿತ ಮಲ್ಲಿಗೆ ಹೂವಿನ ಸಸಿಗಳನ್ನು ತರಿಸುವ ಮತ್ತು ಆ ಕೃಷಿ ಬಗ್ಗೆ ಕಲಿಸುವ ಏರ್ಪಾಡನ್ನೂ ಮಾಡಿದರು. ಇದರಿಂದಾಗಿ ಅಲ್ಲಿಂದೀಚೆಗೆ ಪಾಂಗಾಳ ಧರ್ಮಕೇಂದ್ರಕ್ಕೊಳಪಟ್ಟ ಭಕ್ತಾಧಿಗಳು ಮಾತ್ರವಲ್ಲದೆ ಜಾತಿ – ಮತ ಭೇದವಿಲ್ಲದೆ ಇತರರೂ ಉತ್ತಮ ಜೀವನ ಸಾಗಿಸಲು ನೆರವಾಗಿದೆ. (ವಂದನೀಯ ಫಾದರ್ ಬೇಸಿಲ್ ಸಾಲ್ವದೊರ್ ಪೆರಿಸ್ ಅವರು ಬಳಿಕ 1956 – 58ರ ಅವಧಿಯಲ್ಲಿ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿಯೂ ಸೇವೆ ನೀಡಿದ್ದಾರೆ). ಅಂದು ಅವರು ಪರಿಚಯಿಸಿದ ಮಲ್ಲಿಗೆ ಪುಷ್ಪ ಕೃಷಿಯನ್ನು ಇಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲೆಡೆ ಕೈಗೊಳ್ಳಲಾಗುತ್ತಿದ್ದು ಹಲವು ಕುಟುಂಬಗಳಿಗೆ ಜೀವಾನಾಧಾರವಾಗಿದೆ.
ಬಾಲಕ ಅಲ್ಫೋನ್ಸ್ ತಮ್ಮ ಒಂದರಿಂದ ನಾಲ್ಕನೇ ತರಗತಿವರೆಗಿನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಾಂಗಾಳ ಧರ್ಮಕೇಂದ್ರ ಕ್ಕೊಳಪಟ್ಟ ಶಂಕರಪುರದ ಸಂತ ಜಾನರ ಪ್ರಾಥಮಿಕ ಶಾಲೆಯಲ್ಲಿ, ಐದರಿಂದ ಎಂಟನೇ ತರಗತಿಯ ಮಾಧ್ಯಮಿಕ ಶಿಕ್ಷಣವನ್ನು ಶಿರ್ವ ಧರ್ಮಕೇಂದ್ರಕ್ಕೊಳಪಟ್ಟ ಡೊನ್ ಬೊಸ್ಕೊ ಮಾಧ್ಯಮಿಕ ಶಾಲೆಯಲ್ಲಿ ಮತ್ತು ತಮ್ಮ ಮೆಟ್ರಿಕ್ಯುಲೇಶನ್ವರೆಗಿನ ಶಿಕ್ಷಣವನ್ನು ಉಡುಪಿ ಸಮೀಪದ ಕಲ್ಯಾಣಪುರ ಧರ್ಮಕೇಂದ್ರ ಅಧೀನದ ಮಿಲಾಗ್ರೆಸ್ ಮಾತೆಗೆ ಸಮರ್ಪಿಸಲ್ಪಟ್ಟ ಫ್ರೌಡ ಶಾಲೆಯಲ್ಲಿ ಪಡೆದರು. ಅತೀ ವಂದನೀಯರ ಸಮಕಾಲೀನರು ಹೇಳಿದಂತೆ ಅವರು ಶಿಕ್ಷಣದಲ್ಲಿ ಪ್ರತಿಭಾನ್ವಿತರಾಗಿದ್ದರು ಮತ್ತು ಪಾಂಗಾಳ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಮೆಟ್ರಿಕ್ಯುಲೇಶನ್ ಶಿಕ್ಷಣ ಪಡೆದ ಕೆಲವೇ ಮಂದಿಯಲ್ಲಿ ಒಬ್ಬರಾಗಿದ್ದರು.
ಮಂಗಳೂರು ಗುರುಮಠಕ್ಕೆ ಸೇರ್ಪಡೆ, ಕ್ಯಾಂಡಿಯಲ್ಲಿ ತರಬೇತಿ ಮತ್ತು ಯಾಜಕಾಭಿಷೇಕೋತ್ಸವ:
ಮೆಟ್ರಿಕ್ಯುಲೇಶನ್ ಶಿಕ್ಷಣ ಮುಗಿಸುವ ಹೊತ್ತಿಗೆ ಯುವಕ ಅಲ್ಫೋನ್ಸರಲ್ಲಿ ದೈವಿಕ ಪ್ರೇರಣೆಯ ಮನವರಿಕೆಯಾಗಿ ತನ್ನ ಜೀವನವನ್ನು ಧರ್ಮಸಭೆಗೆ ಮುಡಿಪಾಗಿಡುವ ಹುಮ್ಮಸ್ಸು ಬೆಳೆದಿತ್ತು. ಇದಕ್ಕೆ ಅವರ ಕುಟುಂಬ ಮತ್ತು ಧರ್ಮಕೇಂದ್ರದಲ್ಲಿನ ಭಕ್ತಿ-ಭಾವದ ಪರಿಣಾಮವೂ ಮೇಳೈಸಿತ್ತು. ಪಾಂಗಾಳ ಧರ್ಮಕೇಂದ್ರದ ಗುರು ವಂದನೀಯ ಫಾದರ್ ಬೇಸಿಲ್ ಪೆರಿಸ್, ಮಿಲಾಗ್ರೆಸ್ ಫ್ರೌಡ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ವಂದನೀಯ ಫಾದರ್ ಆಲ್ಫ್ರೇಡ್ ಜೆ. ಟೆಲ್ಲಿಸ್ ಅವರ ಪ್ರಭಾವವೂ ಯುವಕ ಅಲ್ಫೋನ್ಸರ ಮೇಲಾಗಿತ್ತು.ತಾವು ಮಂಗಳೂರು ಸಂತ ಜೋಸೆಫರ ಗುರುಮಠಕ್ಕೆ ಸೇರುವ ಹೊತ್ತಿಗೆ ನಡೆದ ಒಂದು ಘಟನೆಯನ್ನು ಅತೀ ವಂದನೀಯರು ಹಲವಾರು ಬಾರಿ ಪ್ರಸ್ತಾಪಿಸಿದ್ದಾರೆ. ಅದು ಹೀಗಿದೆ. ಮೆಟ್ರಿಕ್ಯುಲೇಶನ್ ಫಲಿತಾಂಶದ ದಿನ ಅಲ್ಫೋನ್ಸರು ಶಾಲೆಯಲ್ಲಿ ಫಲಿತಾಂಶ ನೋಡಿದಾಗ ಅವರು ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದರು. ತಮ್ಮ ಮುಂದಿನ ಯೋಜನೆಯನ್ನು ಮಾತಾಪಿತರಿಗೆ ಹೇಳುವ ತವಕ. ಓಡೋಡಿ ಮನೆಗೆ ಬಂದಾಗ ಅವರ ತಂದೆ ಗದ್ದೆಯಲ್ಲಿ ಕೋಣಗಳ ನೊಗಕ್ಕೆ ನೇಗಿಲನ್ನು ಕಟ್ಟಿ ಉಳುಮೆ ಮಾಡುತ್ತಿದ್ದಾರೆ. ತಂದೆಯ ಬಳಿಗೆ ಹೋದ ಅಲ್ಫೋನ್ಸರು, ಯಾಜಕರಾಗುವ ಬಯಕೆ ವ್ಯಕ್ತಪಡಿಸಿ ಗುರುಮಠ ಸೇರಲು ತಂದೆಯ ಅನುಮತಿ ಕೇಳುತ್ತಾರೆ. ಒಂದನೇ ಬಾರಿ ಕೇಳಿದಾಗ ತಂದೆಯಿಂದ ಉತ್ತರವಿಲ್ಲ. ಎರಡನೇ ಬಾರಿ ಕೇಳಿದರು. ಊಹೂಂ.... ಮೂರನೇ ಬಾರಿ ಕೇಳಿದಾಗ ತಂದೆ ಹೇಳಿದ್ದಿಷ್ಟೇ (ಕೊಂಕಣಿಯಲ್ಲಿ) “ನಾಂಗ್ರಾಕ್ ಹಾತ್ ಲಾಯಿಲ್ಲೊ ಪಾಟಿಂ ಪಳೆನಾ”. ಅದರ ಕನ್ನಡ ಭಾಷಾಂತರ - ‘ನೇಗಿಲಿಗೆ ಕೈ ಹಚ್ಚಿದವನು ಹಿಂತಿರುಗಿ ನೋಡುವುದಿಲ್ಲ’. ಅವರ ತಂದೆ ಶ್ರೀ ದಿಯೋಗ್ ಮಥಾಯಸ್ ಹೇಳಿದ ಆ ವಾಕ್ಯದ ತಾತ್ಪರ್ಯ ಇಷ್ಟೇ – ದೇವರ ಸೇವೆಗಾಗಿ ಗುರುಮಠ ಸೇರಲು ಇಚ್ಚಿಸಿರುವಾಗ ಯಾವತ್ತೂ ಹಿಂತಿರುಗಿ ಬರುವಂತಿಲ್ಲ. ಅವರ ತಂದೆ ಅಂದು ಹೇಳಿದ್ದು ಅತೀ ವಂದನೀಯರ ಜೀವನದಲ್ಲಿ ನಿಜವೇ ಆಗಿದೆ. ದಿಯೋಗ್ ಅವರ ಪುತ್ರ ಅಲ್ಫೋನ್ಸ್ ಧರ್ಮಸಭೆಯಲ್ಲಿ ಮುನ್ನಡೆಯುತ್ತಾ ಸಾಗಿದರು.
ಆಗಿನ ಕಾಲದಲ್ಲಿ ‘ಪೂರ್ವದ ರೋಮ್’ ಎಂತಲೇ ಕರೆಯಲ್ಪಟ್ಟು ‘ದೇವರ ಸೇವೆಯ ತೊಟ್ಟಿಲು’ ಎಂದೇ ಪರಿಗಣಿತವಾಗಿದ್ದ ಮಂಗಳೂರು ಧರ್ಮಕ್ಷೇತ್ರದ ಗುರುಗಳಾಗುವ ಬಯಕೆಯಿಂದ ತರುಣ ಅಲ್ಫೋನ್ಸರು 1945ರ ಜೂನ್ನಲ್ಲಿ ಮಂಗಳೂರಿನ ‘ಜೆಪ್ಪು’ ಎಂಬಲ್ಲಿರುವ ಸಂತ ಜೋಸೆಫರ ಗುರುಮಠ ಪ್ರವೇಶಿದರು.
ಅತೀ ವಂದನೀಯರ ಊರು ಪಾಂಗಾಳದಿಂದ ಮಂಗಳೂರಿನ ದೂರ ಸುಮಾರು 35 ಮೈಲಿಗಳು. ನಡುವೆ ಮೂರು ನದಿಗಳು. ಆಗಿನ್ನೂ ಸೇತುವೆಗಳಾಗಿರದ ಕಾರಣ ಆ ನದಿಗಳನ್ನು ದೋಣಿಯಲ್ಲಿ ದಾಟಬೇಕಿತ್ತು. ಆಗೊಂದು – ಈಗೊಂದು ಇದ್ದ ಬಸ್ಸಿನ ಮೂಲಕ ಮುಂದಿನ ನದಿಯವರೆಗೆ ಪ್ರಯಾಣ. ದೋಣಿಯಲ್ಲಿ ನದಿ ದಾಟಿದ ಬಳಿಕ ಮತ್ತೊಂದು ನದಿಯವರೆಗೆ ಇನ್ನೊಂದು ಬಸ್ಸಿನಲ್ಲಿ ಪ್ರಯಾಣ. ಅಂತಹ ಸನ್ನಿವೇಶದಲ್ಲಿ ತನ್ನೂರಿನಿಂದ ಮಂಗಳೂರು ನಗರ ತಲಪಲು ಅಥವಾ ಮಂಗಳೂರು ನಗರದಿಂದ ಪಾಂಗಾಳಕ್ಕೆ ಬರಲು 6 – 8 ಗಂಟೆಗಳಷ್ಟು ಕಾಲ ತಗಲುವ ಆಗಿನ ಕಾಲದ ಕಷ್ಟಕರ ಪ್ರಯಾಣದ ಬಗ್ಗೆ ಘನತೆವೆತ್ತವರು ಹಲವು ಬಾರಿ ಹೇಳಿದ್ದಿದೆ.
ಗುರುಮಠ ಪ್ರವೇಶ ಪಡೆದಂದಿನಿಂದಲೇ ಅಲ್ಲಿನ ಶಿಕ್ಷಣಕ್ಕೆ ಬ್ರದರ್ ಅಲ್ಫೋನ್ಸ್ ಹೊಂದಿಕೊಂಡು ಸಾಗತೊಡಗಿದರು. ಇಂಗ್ಲಿಷ್ ಮತ್ತು ಲ್ಯಾಟಿನ್ ಭಾಷೆಗಳನ್ನು ಮತ್ತು ದೈನಂದಿನ ಜೀವನದ ಕುರಿತಾಗಿನ ಇತರ ವಿಚಾರಗಳನ್ನು ಸುಮಾರು ಎರಡು ವರ್ಷಗಳ ಕಾಲ ಅವರು ಕಲಿತರು. ಈ ಭಾಷೆಗಳಲ್ಲಿ ಮತ್ತು ಇತರ ವಿಷಯಗಳಲ್ಲಿ ಬಹುಶಃ ಅವರ ಪ್ರತಿಭೆ ಆಗಲೇ ಎದ್ದು ಕಾಣುತ್ತಿತ್ತು. ಹೀಗಿರುತ್ತಾ, ಎರಡೂವರೆ ವರ್ಷಗಳಾಗುವ ಹೊತ್ತಿಗೆ ತತ್ವಶಾಸ್ತ್ರ (ಫಿಲೋಸಫಿ) ಮತ್ತು ದೈವಶಾಸ್ತç (ಥಿಯೋಲೊಜಿ) ಶಿಕ್ಷಣಕ್ಕಾಗಿ ಅವರನ್ನು ಸಿಲೋನ್ನ (ಶ್ರೀಲಂಕಾದ) ಕ್ಯಾಂಡಿ ಪೊಂಟಿಫಿಕಲ್ ಪೇಪಲ್ ಗುರುಮಠಕ್ಕೆ (ಸೆಮಿನರಿಗೆ) ಕಳುಹಿಸಲಾಯಿತು. ಅಲ್ಲಿಯೂ ಅವರ ಶಿಕ್ಷಣ ಬಹಳ ಉತ್ಸಾಹ - ಹುಮ್ಮಸ್ಸಿನಿಂದ ಸಾಗಿತು. ಯಶಸ್ವಿ ಶಾಸ್ತ್ರಭ್ಯಾಸದ ಬಳಿಕ ಅವರಿಗೆ ದಿಯಾಕನ್ (ಡೀಕನ್) ದೀಕ್ಷೆ ನೀಡಲಾಯಿತು.
ಆಗಸ್ಟ್ 24, 1954ರಂದು ಕ್ಯಾಂಡಿಯಲ್ಲಿಯೇ ಡೀಕನ್ ಅಲ್ಫೋನ್ಸರಿಗೆ ಯಾಜಕಾಭಿಷೇಕ ದೊರೆತು ಅವರು ಗುರುಗಳಾದರು. ಮತ್ತೂ ಕೆಲವು ತಿಂಗಳು ಅಲ್ಲಿಯೇ ಉಳಿದು ಹೆಚ್ಚಿನ ವಿದ್ಯಾಭ್ಯಾಸ ಪಡೆದು ಆ ವರ್ಷದ ಕೊನೆಯಲ್ಲಿ ಅವರು ಮಂಗಳೂರಿಗೆ ಮರಳಿದರು. 1954 ಡಿಸೆಂಬರ ತಿಂಗಳಲ್ಲಿ ತಮ್ಮ ಮಾತೃ ಧರ್ಮಕೇಂದ್ರ ಪಾಂಗಾಳ ಇಗರ್ಜಿಯಲ್ಲಿ ಕುಟುಂಬವರ್ಗ ಮತ್ತು ಧರ್ಮಕೇಂದ್ರದ ಭಕ್ತಾದಿಗಳೊಂದಿಗೆ ತಮ್ಮ ಪ್ರಥಮ ಬಲಿಪೂಜೆಯನ್ನು ಸಂಭ್ರಮ ಸಡಗರಗಳೊಂದಿಗೆ ಅರ್ಪಿಸಿದರು.
ಗುರುಗಳಾಗುವ ದೈವಪ್ರೇರಣೆ (ವೊಕೇಶನ್) ಪಡೆದ ಪಾಂಗಾಳ ಧರ್ಮಕೇಂದ್ರದ ವಿಶ್ವಾಸಿ ತರುಣರಲ್ಲಿ ವಂ. ಫಾದರ್ ಅಲ್ಫೋನ್ಸ್ ಅವರು ಎರಡನೆಯವರಾದರೂ ಧರ್ಮಕೇಂದ್ರದ ಗುರು ವಂ. ಫಾದರ್ ಬೇಸಿಲ್ ಪೆರಿಸ್ ಅವರ ಪ್ರಯತ್ನದಿಂದ ನಿರ್ಮಿಸಲ್ಪಟ್ಟ ಸಂತ ಜಾನರ ನೂತನ ದೇವಮಂದಿರದಲ್ಲಿ ಪ್ರಥಮ ಬಲಿಪೂಜೆ ಅರ್ಪಿಸಿದ ಪಾಂಗಾಳ ಧರ್ಮಕೇಂದ್ರ ವ್ಯಾಪ್ತಿಯ ನೂತನ ಯಾಜಕರಲ್ಲಿ ವಂ. ಫಾದರ್ ಅಲ್ಫೋನ್ಸ್ ಅವರೇ ಪ್ರಥಮರು. ಪಾಂಗಾಳ ಧರ್ಮಕೇಂದ್ರದ ವಿಶ್ವಾಸಿ ತರುಣರಲ್ಲಿ ಯಾಜಕಾಭಿಷೇಕ ಪಡೆದ ಮೊದಲನೆಯವರಾಗಿದ್ದ ವಂ. ಫಾದರ್ ಥೋಮಸ್ ಡೇಸ ಅವರ ಗುರು ದೀಕ್ಷೆ 1948ರಲ್ಲಿ ಜರಗಿದಾಗ ಕಟ್ಟಡದ ನಿರ್ಮಾಣ ಆಗುತ್ತಿತ್ತಷ್ಟೇ. ಈಗಲೂ ಮಜಬೂತವಾಗಿರುವ ಆ ಹೊಸ ದೇವಮಂದಿರದ ಉದ್ಘಾಟನೆ ಮತ್ತು ಆಶೀರ್ವಚನ 1953ರಲ್ಲಾಗಿತ್ತು.
ಸಹಾಯಕ ಗುರು ಸೇವೆ, ರೋಮ್ನಲ್ಲಿ ವಿದ್ಯಾಭ್ಯಾಸ, ಮಂಗಳೂರು ಧರ್ಮಾಧ್ಯಕ್ಷರ ಕಾರ್ಯದರ್ಶಿ ಮತ್ತು ಧರ್ಮಪ್ರಾಂತ್ಯದ ಚಾನ್ಸಲರ್:
ಯಾಜಕಾಭಿಷೇಕದ ಬಳಿಕ ವಂ.ಫಾದರ್ ಅಲ್ಫೊನ್ಸ್ ಅವರನ್ನು ಬಜ್ಪೆೆಯ ಸಂತ ಜೋಸೆಫರ ಧರ್ಮಕೇಂದ್ರದ ಸಹಾಯಕ ಗುರುಗಳಾಗಿ ನೇಮಿಸಲಾಯಿತು. (ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಈ ಧರ್ಮಕೇಂದ್ರದ ಸಮೀಪದಲ್ಲಿದೆ). ಬಜ್ಪೆಯಲ್ಲಿ ಅವರು ಒಂದು ವರ್ಷ ದುಡಿದರು. ದಿನವಿಡೀ ಕೆಲಸವಿದ್ದ, ಬಿಡುವಿರದ ಆ ದಿನಗಳನ್ನು ವಿಶ್ರಾಂತ ಮಹಾಧರ್ಮಾಧ್ಯಕ್ಷರು ಸಂದರ್ಶನಗಳಲ್ಲಿ ನೆನಪಿಸಿದ್ದೂ ಇದೆ. ಬಜ್ಪೆಯಲ್ಲಿಯೇ ಅವರ ಪ್ರಪ್ರಥಮ ಹಾಗೂ ಏಕೈಕ ಅವಧಿಯ ಸಹಾಯಕ ಗುರು ಸೇವೆ. ದಣಿವರಿಯದೆ ಉತ್ಸಾಹದಿಂದ ಸೇವೆ ನೀಡಿದ ಅವರ ಸೇವೆ ಹಿರಿಯ ಗುರುಗಳು, ಧರ್ಮಾಧ್ಯಕ್ಷರು, ಮತ್ತಿತರ ಪ್ರಶಂಸೆಗೆ ಪಾತ್ರವಾಗದೆ ಇದ್ದೀತೇ?ವಂ. ಫಾದರ್ ಅಲ್ಫೋನ್ಸ್ ಅವರ ಚತುರತೆ ಮತ್ತು ಸಮರ್ಪಿತ ಮನೋಭಾವವನ್ನು ಕಂಡ ಧರ್ಮಕ್ಷೇತ್ರದ ಅಧಿಕಾರಿಗಳಿಂದ ಅವರನ್ನು ಉಚ್ಚ ಶಿಕ್ಷಣಕ್ಕಾಗಿ ರೋಮ್ಗೆ ಕಳುಹಿಸುವ ನಿರ್ಧಾರ ಕೈಗೊಳ್ಳಲಾಗುತ್ತದೆ. ಆ ಪ್ರಕಾರ ವಂ. ಫಾದರ್ ಅಲ್ಫೋನ್ಸ್ 1995ರಲ್ಲಿ ರೋಮ್ಗೆ ತೆರಳಿ ನಾಲ್ಕು ವರ್ಷಗಳ ಕಾಲ University of Propaganda Fide and Pontifical Lateran UniversityUniversity of Propaganda Fide and Pontifical Lateran Universityಗಳಲ್ಲಿ ಧರ್ಮಸಭೆಯ ಕಾನೂನು (ಕ್ಯಾನನ್ ಲಾ), ಅಂತಾರಾಷ್ಟ್ರೀಯ ಸಿವಿಲ್ ಕಾನೂನು ವಿಷಯಗಳನ್ನು ಅಧ್ಯಯನ ಮಾಡಿ ಡಾಕ್ಟರೆಟ್ ಪದವಿ (DD, JUD, PhL) ಪಡೆದರು. 1959ರಲ್ಲಿ ಅವರು ಮಂಗಳೂರಿಗೆ ಮರಳಿದಾಗ ಅಂತಹ ಉನ್ನತ ಪದವಿ ಪಡೆದ ಭಾರತದ ಕೆಲವೇ ಮಂದಿ ಗುರುವರ್ಯರ ಪೈಕಿ ಅವರು ಒಬ್ಬರಾಗಿದ್ದರು.
ಪಾಂಗಾಳ ಧರ್ಮಕೇಂದ್ರ ಸ್ಥಾಪನೆಯಾಗಿ ನಾಲ್ಕೈದು ವರ್ಷ ಕಳೆದಿದ್ದವು. ದೇವಾಲಯಕ್ಕೆ ಹೊಂದಿಕೊಂಡೇ ಘಂಟೆ ಗೋಪುರವೂ ನಿರ್ಮಾಣವಾಗಿತ್ತು. ಆದರೆ ಘಂಟೆ ಇರಲಿಲ್ಲ. ರೋಮ್ನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದ ವಂ. ಫಾದರ್ ಅಲ್ಫೋನ್ಸ್ ಅವರು ಜರ್ಮನಿಯ ಕಾರ್ಲ್ ಹೀಲ್ ಹೆಸರಿನ ಹಿತೈಷಿಯೊಬ್ಬರ ಕೃಪೆಯಿಂದ ಪಾಂಗಾಳ ಧರ್ಮಕೇಂದ್ರಕ್ಕೆ ಬೃಹತ್ ಘಂಟೆಯೊಂದು ದಾನದ ರೂಪದಲ್ಲಿ ದೊರೆಯುವಂತೆ ಮಾಡಿದರು. ಸುಮಾರು 600 ಪೌಂಡ್ ತೂಕದ ಜರ್ಮನ್ ನಿರ್ಮಿತ ಘಂಟೆಯೊಂದಿಗೆ, ಜರ್ಮನಿಯಿಂದ ಪಾಂಗಾಳದವರೆಗಿನ ಸಾಗಾಟ ವೆಚ್ಚವನ್ನೂ ದಾನಿಗಳೇ ವಹಿಸಿಕೊಂಡಿದ್ದರು. ವಂ. ಫಾದರ್ ಅಲ್ಫೋನ್ಸ್ ಅವರ ಕೃಪೆಯಿಂದ ಜರ್ಮನ್ ದಾನಿಯಿಂದ 1959ರಲ್ಲಿ ಲಭಿಸಿದ ಘಂಟೆ ಪಾಂಗಾಳ ಧರ್ಮಕೇಂದ್ರದಲ್ಲಿ ಇಂದೂ ಮೊಳಗುತ್ತಿದೆ.
ವಂ. ಫಾದರ್ ಅಲ್ಫೊನ್ಸ್ ಅವರ ಬಾಲ್ಯದ ಪಾಂಗಾಳ ಧರ್ಮಕೇಂದ್ರದ ಗುರು, ಅವರ ದೈವಿಕ ಕರೆಯ ಪ್ರೇರಕ ಮತ್ತು ಮಾರ್ಗದರ್ಶಕ, ಬಳಿಕ 1955ರಿಂದ ಮಂಗಳೂರು ಧರ್ಮಕ್ಷೇತ್ರದಲ್ಲಿ ಧರ್ಮಾಧ್ಯಕ್ಷರಾಗಿದ್ದ ಅತೀ ವಂ. ಬೆಸಿಲ್ ಸಾಲ್ವದೊರ್ ಪೆರಿಸ್ ಅವರು 1958ರಲ್ಲಿ ಪೋಪರ ಭೇಟಿಗೆ ರೋಮ್ಗೆ ಪ್ರಯಾಣಿಕರ ಹಡಗಿನಲ್ಲಿ ತೆರಳುತ್ತಿದ್ದವರು ಸಮುದ್ರದಲ್ಲಿಯೇ ಪರಂಧಾಮವನ್ನೈದಿದ್ದರು. ಅವರ ಉತ್ತರಾಧಿಕಾರಿಯಾಗಿ ಅತೀ ವಂ. ರೈಮಂಡ್ ಡಿಮೆಲ್ಲೊ ಅವರು 1959ರಲ್ಲಿ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿ ಸೇವಾ ದೀಕ್ಷೆ ವಹಿಸಿಕೊಂಡಿದ್ದರು. ಧರ್ಮಾಧ್ಯಕ್ಷರು ವಂ. ಫಾದರ್ ಅಲ್ಫೊನ್ಸ್ ರೋಮ್ನಿಂದ ಮರಳುತ್ತಿದ್ದಂತೆ ಅವರನ್ನು ತಮ್ಮ ಕಾರ್ಯದರ್ಶಿ ಹಾಗೂ ಮಂಗಳೂರು ಧರ್ಮಪ್ರಾಂತ್ಯದ ಕುಲಪತಿ (ಚಾನ್ಸಲರ್) ಆಗಿ ನೇಮಕಗೊಳಿಸಿದರು. ಈ ಅವಧಿಯಲ್ಲಿ ಧರ್ಮಪ್ರಾಂತ್ಯದಾದ್ಯಂತ ವಿವಿಧ ವಿಚಾರಣಾ ಕ್ಷೇತ್ರಗಳಿಗೆ, ಸಂಘ - ಸಂಸ್ಥೆಗಳಿಗೆ ಭೇಟಿ ನೀಡುವ, ಧರ್ಮಪ್ರಾಂತ್ಯದ ಬಗ್ಗೆ ತಿಳುವಳಿಕೆ ಹೊಂದುವ ಅವಕಾಶಗಳು ವಂ. ಫಾದರ್ ಅಲ್ಫೊನ್ಸ್ ಅವರಿಗೆ ಲಭಿಸಿದವು.
ನೂತನವಾಗಿ ಅಸ್ತಿತ್ವಕ್ಕೆ ಬಂದ ಚಿಕ್ಕಮಗಳೂರು ಧರ್ಮಕ್ಷೇತ್ರ, ಪ್ರಥಮ ಧರ್ಮಾಧ್ಯಕ್ಷರ ಅಭಿಷೇಕ ಮತ್ತು ಸೇವಾ ಸ್ಥಾನ ಸ್ವೀಕಾರ:
ನವೆಂಬರ 16, 1963ರಂದು ಪೋಪ್ ಆರನೇ ಪಾವ್ಲ್ ಅವರು ತಮ್ಮ ‘ಇಂಡಿಚೆ ರೆಜಿನಿಯೊಸ್’ ವಿಶ್ವಪತ್ರದ ಮೂಲಕ ವಿಶಾಲವಾದ ಮೈಸೂರು ಧರ್ಮಕ್ಷೇತ್ರದಿಂದ ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಕಂದಾಯ ಜಿಲ್ಲೆಗಳನ್ನು ವಿಂಗಡಿಸಿ, ಆ ಜಿಲ್ಲೆಗಳಿಗಾಗಿ ನೂತನ ಚಿಕ್ಕಮಗಳೂರು ಧರ್ಮಕ್ಷೇತ್ರದ ರಚನೆಯನ್ನು ಘೋಷಿಸಿದರು. ನೂತನ ಧರ್ಮಕ್ಷೇತ್ರದ ಪ್ರಥಮ ಧರ್ಮಾಧ್ಯಕ್ಷರನ್ನಾಗಿ ಮಂಗಳೂರು ಧರ್ಮಾಧ್ಯಕ್ಷರ ಕಾರ್ಯದರ್ಶಿ ಮತ್ತು ಮಂಗಳೂರು ಧರ್ಮಪ್ರಾಂತ್ಯದ ಕುಲಪತಿಯಾಗಿದ್ದ ವಂ. ಫಾದರ್ ಅಲ್ಫೋನ್ಸ್ ಮಥಾಯಸ್ ಅವರ ನೇಮಕವನ್ನೂ ಅದೇ ಪತ್ರದ ಮೂಲಕ ಮಾಡಿದರು.ಚಿಕ್ಕಮಗಳೂರು ಧರ್ಮಪ್ರಾಂತ್ಯದ ಪ್ರಧಾನ ದೇವಾಲಯ (ಕೆಥೆದ್ರಲ್) ಆಗಿ ನಿಯುಕ್ತಿಗೊಂಡ ಸಂತ ಜೋಸೆಫರ ಪ್ರಧಾನಾಲಯದಲ್ಲಿ ನೂತನ ಧರ್ಮಪ್ರಾಂತ್ಯದ ಸ್ಥಾಪನೆ ಮತ್ತು ನೂತನ ಧರ್ಮಾಧ್ಯಕ್ಷರ ದೀಕ್ಷಾ ವಿಧಿ ಫೆಬ್ರವರಿ 5, 1964ರಂದು ಜರಗಿತು. ಪ್ರತಿಷ್ಟಾಪನೆಯ ಪ್ರಧಾನ ಅಧಿಕಾರಿಗಳಾಗಿದ್ದವರು ಭಾರತಕ್ಕೆ ಆಗಿನ ವೆಟಿಕನ್ ಉಪರಾಯಭಾರಿ ಮತ್ತು ಮೆಲಿಟನ್ ಮಹಾಧರ್ಮಕ್ಷೇತ್ರದ ನಾಮಮಾತ್ರ ಮಹಾಧರ್ಮಾಧ್ಯಕ್ಷ ಘನತೆವೆತ್ತ ಜೇಮ್ಸ್ ರಾಬರ್ಟ್ ನೊಕ್ಸ್ (Internuncio Archbishop James Robert Knox, Titular Archbishop of Melitene) ಅವರು. ಪವಿತ್ರೀಕರಣ ಮತ್ತು ಪ್ರತಿಷ್ಟಾಪನೆಯ ಪ್ರಧಾನ ಸಹ-ಅಧಿಕಾರಿಗಳಾಗಿದ್ದವರು ಅತೀ ವಂ. ಆಲ್ಬರ್ಟ್ ವಿನ್ಸೆಂಟ್ ಡಿಸೋಜ (ಕಲ್ಕತ್ತಾ ಮಹಾ ಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರು) ಮತ್ತು ಅತೀ ವಂ. ರೈಮಂಡ್ ಡಿಮೆಲ್ಲೊ (ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು).
ಯಾಜಕಾಭಿಷೇಕಗೊಂಡು ಕೇವಲ 9 ವರ್ಷಗಳಾಗಿದ್ದ ನೂತನ ಧರ್ಮಾಧ್ಯಕ್ಷ ಅತೀ ವಂ. ಅಲ್ಫೋನ್ಸ್ ಮಥಾಯಸ್ ಅವರಿಗೆ ಆಗ ಕೇವಲ 35ರ ಹರೆಯ. ಬಹುಶಃ ಆ ಕಾಲದ ಭಾರತದ ಧರ್ಮಾಧ್ಯಕ್ಷರುಗಳಲ್ಲಿ ಅತ್ಯಂತ ಕಿರಿಯರು. ಆ ಸಮಯದಲ್ಲಿ ಎರಡನೇ ವೆಟಿಕನ್ ಮಹಾಸಭೆ ಇನ್ನೂ ನಡೆಯುತ್ತಿತ್ತು. ಅವುಗಳ ಮೂರನೇ ಮತ್ತು ನಾಲ್ಕನೇ ಅಧಿವೇಶನಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ, ಅಲ್ಲಿಂದ ಅನುಭವ ಪಡೆಯುವ, ತಮ್ಮ ಅನುಭವ ಹಂಚಿಕೊಳ್ಳುವ ಅವಕಾಶ ಉತ್ಸಾಹಿ, ತರುಣ ಧರ್ಮಾಧ್ಯಕ್ಷರಿಗೆ ಲಭಿಸಿತು.
ಭೌಗೋಳಿಕವಾಗಿ ಚಿಕ್ಕಮಗಳೂರು ಧರ್ಮಕ್ಷೇತ್ರ ಪಶ್ಚಿಮ ಘಟ್ಟದಲ್ಲಿದ್ದು ಗುಡ್ಡಗಾಡು ಮತ್ತು ಕಣಿವೆ ಪ್ರದೇಶಗಳಿಂದ ಕೂಡಿದೆ. ಅಲ್ಲಿನ ಪ್ರಧಾನ ಬೆಳೆ ಕಾಫಿ. ಕೆಲವು ಕಡೆ ಚಹಾ ಕೃಷಿಯೂ ಇದ್ದು, ಭತ್ತ, ರಾಗಿ, ಜೋಳ, ಕಬ್ಬು, ತರಕಾರಿ, ದ್ವಿದಳ ಧಾನ್ಯ ಮತ್ತು ತೆಂಗು ಇತರ ಬೆಳೆಗಳು. ಕಥೋಕರಲ್ಲಿ ಹೆಚ್ಚಿನವರು ಒಂದೆರಡು ಶತಮಾನಗಳ ಹಿಂದೆ ಕಾಫಿ ತೋಟಗಳಲ್ಲಿ ಕೆಲಸದ ಸಲುವಾಗಿ ಸೌತ್ ಕೆನರಾದಿಂದ ತೆರಳಿ ಬಳಿಕ ಅಲ್ಲಿಯೇ ನೆಲೆಗೊಂಡ ಕೊಂಕಣಿ ಭಾಷಿಕರ ಪೀಳಿಗೆ. ಇವರಲ್ಲಿ ಕೆಲವರು ತೋಟಗಳ ಮಾಲೀಕರೂ ಆಗಿದ್ದಾರೆ. ಚಿಕ್ಕಮಗಳೂರು ಧರ್ಮಕ್ಷೇತ್ರದ ಕ್ರೈಸ್ತರ ಚರಿತ್ರೆ ಸುಮಾರು 16ನೇ ಶತಮಾನದ ಹೊತ್ತಿಗೆ ಆರಂಭಗೊಳ್ಳುತ್ತದೆ. 18ನೇ ಶತಮಾನದ ಹೊತ್ತಿಗೆ ಯೇಸು ಸಭೆಯ ಗುರುಗಳಿಂದ ಕ್ರೈಸ್ತ ಧರ್ಮ ಸ್ವೀಕರಿಸಿದ ಕಥೋಲಿಕರು ಮಲೆನಾಡಿನ ಹಾಸನ ಜಿಲ್ಲೆಯಲ್ಲಿ ಕಂಡು ಬಂದಿದ್ದಾರೆ. ಎಂ.ಇ.ಪಿ ಫಾರ್ಸ್ ಅವರೂ ಚಿಕ್ಕಮಗಳೂರು ಧರ್ಮಕ್ಷೇತ್ರದಲ್ಲಿ ಕ್ರೈಸ್ತಮತ ವಿಶ್ವಾಸಿಗಳ ಹೆಚ್ಚಳಕ್ಕೆ ಕಾರಣಕರ್ತರಾಗಿದ್ದಾರೆ. ಚಿಕ್ಕಮಗಳೂರು ಧರ್ಮಕ್ಷೇತ್ರದಾದ್ಯಂತ ತಮಿಳುನಾಡಿನಿಂದ ಆಗಮಿಸಿ ನೆಲೆನಿಂತ ತಮಿಳರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ.
ಚಿಕ್ಕಮಗಳೂರು ಧರ್ಮಕ್ಷೇತ್ರ ರಚನೆಯಾದಾಗ ಅಲ್ಲಿ 19 ವಿಚಾರಣಾ ಕ್ಷೇತ್ರಗಳು ಮತ್ತು 18 ಧರ್ಮಕ್ಷೇತ್ರಕ್ಕೆ ಸಂಬಂಧಪಟ್ಟ ಗುರುಗಳಿದ್ದರು. ಉತ್ಸಾಹಿ ತರುಣ ಧರ್ಮಾಧ್ಯಕ್ಷರು ನೂತನ ಧರ್ಮಕ್ಷೇತ್ರದ ಅಭಿವೃದ್ದಿಗೆ ಟೊಂಕ ಕಟ್ಟಿ ಹಗಳಿರುಳು ದುಡಿದರು. ಚಿಕ್ಕಮಗಳೂರಿನ ತಮ್ಮ 23 ವರ್ಷಗಳ ಸೇವೆಯಲ್ಲಿ ದಣಿವರಿಯದೆ ದುಡಿದ ಫಲವಾಗಿ ಅವರು ಬೆಂಗಳೂರು ಮಹಾ ಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾಗಿ ತೆರಳುವಾಗ ಚಿಕ್ಕಮಗಳೂರಿನಲ್ಲಿ 39 ವಿಚಾರಣಾ ಕ್ಷೇತ್ರಗಳು, 1 ಪುಣ್ಯಕ್ಷೇತ್ರ, ವಸತಿ ಗುರುಗಳಿರುವ 3 ಉಪಠಾಣೆಗಳು, 56 ಧರ್ಮಕ್ಷೇತ್ರ ಅಧೀನದ ಗುರುಗಳು, ಅನೇಕ ಧಾರ್ಮಿಕ ಸಂಸ್ಥೆಗಳ ಗುರುಗಳು, ಭಗಿನಿಯರು, ಒಂದು ಪ್ರಥಮ ದರ್ಜೆ ಕಾಲೇಜನ್ನೂ ಒಳಗೊಂಡು ಹಲವಾರು ಶೈಕ್ಷಣಿಕ ಸಂಸ್ಥೆಗಳು, ಕಿರು ಗುರುಮಠ, ಆಸ್ಪತ್ರೆ, ತಾಂತ್ರಿಕ ಶಾಲೆ ಮತ್ತು ಇತರ ಹಲವಾರು ಸಂಸ್ಥೆಗಳಿದ್ದವು. ಧಾರ್ಮಿಕ ಮತ್ತು ಲೌಕಿಕವಾಗಿ ಧರ್ಮಕ್ಷೇತ್ರ ಬಹಳಷ್ಟು ಅಭಿವೃದ್ಧಿ ಸಾಧಿಸಿತ್ತು.
ಬೆಂಗಳೂರು ಮಹಾ ಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾಗಿ Archbishop of Bangalore Metropolitan Archdiocese):
ಚಿಕ್ಕಮಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿ 23 ವರ್ಷಗಳ ಅವಿರತ ಸೇವೆಯೊಂದಿಗೆ ಆ ಧರ್ಮಕ್ಷೇತ್ರವನ್ನು ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸಿದ ಧರ್ಮಾಧ್ಯಕ್ಷ ಅತೀ ವಂ. ಅಲ್ಫೊನ್ಸ್ ಮಥಾಯಸ್ ಅವರನ್ನು ಜಗದ್ಗುರು ಪೋಪ್ ಜಾನ್ ಪಾವ್ಲ್ ದ್ವಿತೀಯರು ಬೆಂಗಳೂರು ಮಹಾ ಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರನ್ನಾಗಿ ಪದೋನ್ನತಿಗೊಳಿಸಿದರು. ಅವರ ನೇಮಕದ ಆದೇಶವನ್ನು 1986 ಸಪ್ಟೆಂಬರ 12ರಂದು ಸಾರಲಾಯಿತು. ಅತೀ ವಂದನೀಯರು 1986 ಡಿಸೆಂಬರ್ 3ರಂದು, ಸಂತ ಫ್ರಾನ್ಸಿಸ್ ಕ್ಸೇವಿಯರ್ ಅವರ ಹಬ್ಬದಂದು ಸೇವಾ ಸ್ಥಾನ ವಹಿಸಿಕೊಂಡರು. ಬಳಿಕ ವಿಳಂಬಕ್ಕೆ ಆಸ್ಪದವಿಲ್ಲದಂತೆ ಕಾರ್ಯತತ್ಪರರಾಗಿ ಬೆಂಗಳೂರು ಮಹಾಧರ್ಮಕ್ಷೇತ್ರದ ವಿವಿಧ ವಿಚಾರಗಳ ಬಗ್ಗೆ ಅಧ್ಯಯನ ನಡೆಸಿದರು. ಧರ್ಮಕ್ಷೇತ್ರದ ಯಾಜಕರು, ಧಾರ್ಮಿಕ ಮತ್ತು ಸಾಮಾನ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಫಲವಾಗಿ ಸರ್ವರಿಗೆ ಸಮ್ಮತವೆಂಬಂತಹ ನೀತಿ ರೂಪಿಸುವಲ್ಲಿ ಅವರು ಸಫಲರಾದರು. ಹನ್ನೆರಡು ವರ್ಷಗಳ ಕಾಲ ಉತ್ತಮ ರೀತಿಯಲ್ಲಿ ಮಹಾ ಧರ್ಮಕ್ಷೇತ್ರದ ಆಗುಹೋಗುಗಳನ್ನು ನಿರ್ವಹಿಸಿದರು. ಆರೋಗ್ಯದ ಕಾರಣಕ್ಕೆ ತಮ್ಮ ಮಹಾಧರ್ಮಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಅವರ ರಾಜೀನಾಮೆಯು 1998 ಮಾರ್ಚ್ 24ರಂದು ಸ್ವೀಕೃತಗೊಂಡಿತು.ಅತೀ ವಂ. ಅಲ್ಫೊನ್ಸ್ ಮತಾಯಸ್ ಅವರನ್ನು ಅಭಿನಂದಿಸಿ ಶುಭವಿದಾಯ ಕೋರಲು 1998 ಎಪ್ರಿಲ್ 19ರಂದು ಬೆಂಗಳೂರಿನ ಸೈಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ ಯಾಜಕರು, ಧಾರ್ಮಿಕ ಸಹೋದರ - ಸಹೋದರಿಯರು, ಸಾಮಾನ್ಯರು, ಅಧಿಕಾರಿಗಳು, ಅಭಿಮಾನಿಗಳನ್ನೊಳಗೊಂಡು ಸುಮಾರು 6000 ಜನರು ಭಾಗವಹಿಸಿದ ಸಾರ್ವಜನಿಕ ಸಮಾರಂಭ ಜರಗಿತ್ತು. ಅಂದು ಅಲ್ಲಿ ವಾಚಿಸಿ ಅತೀ ವಂದನೀಯರಿಗೆ ಸಮರ್ಪಿಸಿದ ವಿದಾಯ ಮಾನಪತ್ರವು ಮಹಾಧರ್ಮಾಧ್ಯಕ್ಷ ಅಲ್ಫೊನ್ಸ್ ಮಥಾಯಸ್ ಅವರ ವ್ಯಕ್ತಿತ್ವ ಮತ್ತು ಖ್ಯಾತಿಗೆ ಹಿಡಿದ ಕೈಗನ್ನಡಿಯಂತಿದೆ. ಬೆಂಗಳೂರು ಮಹಾ ಧರ್ಮಕ್ಷೇತ್ರದಲ್ಲಿ ಅವರ ಸೇವಾ ವಿವರಗಳನ್ನು ಆ ಪತ್ರದಲ್ಲಿ ಅತ್ಯುತ್ತಮ ರೀತಿಯಲ್ಲಿ ಮಂಡಿಸಲಾಗಿದ್ದು ಅದರಲ್ಲಿನ ಕೆಲವು ಅಂಶಗಳನ್ನೇ ಇಲ್ಲಿ ಪುನರುಚ್ಛರಿಸುತ್ತೇನೆ.
ಬೆಂಗಳೂರು ಮಹಾ ಧರ್ಮಪ್ರಾಂತ್ಯದಾದ್ಯಂತ ಹಲವೆಡೆ ಪ್ರಾರ್ಥನಾ ಮಂದಿರಗಳ ನಿರ್ಮಾಣಕ್ಕಾಗಿ ಸ್ಥಳಾವಕಾಶ ಏರ್ಪಾಡಿನೊಂದಿಗೆ ನೂತನ ದೇವಾಲಯಗಳ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಅವರ ಆಶೀರ್ವಾದ ಮತ್ತು ಪ್ರೋತ್ಸಾಹದಿಂದಾಗಿ ದಾಸರಹಳ್ಳಿಯ ಸಂತ ಪಾವ್ಲರ ದೇವಾಲಯ; ಚಿಕ್ಕಕಮ್ಮನಹಳ್ಳಿಯ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯ; ಜಯನಗರದ ಕ್ರಿಸ್ತು ಪ್ರಭಾಲಯ; ಗಂಗೇನಹಳ್ಳಿಯ ಸಂತ ಜೂದರ ದೇವಾಲಯ; ಸುಲ್ತಾನಪಾಳ್ಯದ ಸಂತ ಥಾಮಸ್ ದೇವಾಲಯ, ಯಲಹಂಕದ ವೆಲಂಕಣಿ ಮಾತೆಯ ದೇವಾಲಯ ಇವುಗಳಲ್ಲದೆ ಯಲಹಂಕ, ಚುಂಚನಘಟ್ಟ, ಮೇಸ್ತ್ರಿಪಾಳ್ಯ, ವಿಜಯಪುರ, ಬೈರತಿ, ಇರಿನಪಾಳ್ಯ, ನಾಗನಹಳ್ಳಿ, ಹರೋಬಲಿ ಮತ್ತಿತರ ಕಡೆ ದೇವಾಲಯಗಳ ನಿರ್ಮಾಣ ವಾ ಸಂಬಂಧಪಟ್ಟ ಕೆಲಸ ಕಾರ್ಯಗಳಾಗಿವೆ. ಅವರ ಸೇವಾವಧಿಯಲ್ಲಿ ಕೆಲವು ಕಡೆ ಗುರುಗಳ ನಿವಾಸಗಳು ನಿರ್ಮಾಣಗೊಂಡಿವೆ.
ಮಹಾಧರ್ಮಾಧ್ಯಕ್ಷರು ಮಹಾ ಧರ್ಮಕ್ಷೇತ್ರದ ದೇವಾಲಯಗಳಲ್ಲಿ ಧಾರ್ಮಿಕ ಮತ್ತು ಧರ್ಮಾಧ್ಯಕ್ಷರಿಗೆ ಸಂಬಂಧಪಟ್ಟಂತಹ ಕರ್ತವ್ಯಗಳನ್ನು ಚಾಚೂ ತಪ್ಪದಂತೆ ನಿರ್ವಹಿಸಿ ಧರ್ಮಸಭೆಯಲ್ಲಿ ವಿಶ್ವಾಸಿಗಳ ವಿಶ್ವಾಸ ಹೆಚ್ಚಳಕ್ಕೂ ಕಾರಣರಾಗಿದ್ದಾರೆ. ಈ ಸೇವಾ ಕೈಂಕರ್ಯಗಳಲ್ಲಿ ಅವರು ಯಾಜಕರು, ಧಾರ್ಮಿಕ ಸಹೋದರ - ಸಹೋದರಿಯರು ಮತ್ತು ಸಾಮಾನ್ಯ ವಿಶ್ವಾಸಿಗಳ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಸ್ತುತ್ಯಾರ್ಹ ಕಾಯಕವನ್ನೂ ಕೈಗೊಂಡಿದ್ದಾರೆ.
ಅತೀ ವಂ. ಅಲ್ಫೊನ್ಸ್ ಮಥಾಯಸ್ ಭಾರತೀಯ ಕಥೋಲಿಕ್ ಧರ್ಮಾಧ್ಯಕ್ಷರುಗಳ ಮಂಡಳಿ (ಸಿಬಿಸಿಐ) ಅಧ್ಯಕ್ಷರಾಗಿ ಎರಡು ಅವಧಿಗೆ, ಬೆಂಗಳೂರು ಮಲ್ಲೇಶ್ವರಂನಲ್ಲಿರುವ ಸಂತ ಪೀಟರ್ ಪಾಂಟಿಫಿಕಲ್ ಗುರುಮಠ / ಸಂಸ್ಥೆಯ (St. Peter's Pontifical Seminary/Institute) ಕುಲಪತಿಯಾಗಿ ಮತ್ತು ಧರ್ಮಾವರಂ ವಿದ್ಯಾ ಕ್ಷೇತ್ರಂ ಸಂಸ್ಥೆಯ ಪ್ರೊ – ಚಾನ್ಸಲರ್ (ಉಪಕುಲಪತಿ) ಆಗಿ ಅವುಗಳ ಶ್ರೆಯೋಭಿವೃದ್ಧಿಗಾಗಿ ದುಡಿದಿದ್ದಾರೆ.
ತಮ್ಮ ಕಾಲದಲ್ಲಿ ಸುಂದರವಾದ, ವಾಸ್ತುಶಿಲ್ಪ್ಪಾತ್ಮಕವಾಗಿ ಎದ್ದುಕಾಣುವ ಮಹಾಧರ್ಮಾಧ್ಯಕ್ಷರ ನಿವಾಸ ನಿಮಾಣವಾಗುವಂತೆ ಶ್ರಮಿಸಿದ್ದಾರೆ. ಮಹಾಧರ್ಮಕ್ಷೇತ್ರದ ಆರ್ಥಿಕ ಸುಸ್ಥಿತಿಗೂ ಅವರು ಕಾರಣರಾಗಿದ್ದಾರೆ.
ಮಹಾಧರ್ಮಾಧ್ಯಕ್ಷರು ತಮ್ಮ ಅವಧಿಯಲ್ಲಿ ದಲಿತ ಕ್ರೈಸ್ತರ ಸ್ಥಿತಿಗತಿ ತಿಳಿದುಕೊಳ್ಳುವ ಬಗ್ಗೆ ಆ ಕ್ಷೇತ್ರದಲ್ಲಿ ಪರಿಣತಿಯ ಗುರುವೊಬ್ಬರನ್ನು ನೇಮಿಸಿದ್ದು ಮಾತ್ರವಲ್ಲದೆ ಅವರು ಶಿಫಾರಸುಗಳನ್ನು ಜಾರಿಗೆ ತರುವಂತೆ ಶ್ರಮಿಸಿದ್ದಾರೆ. ಎಲ್ಲಾ ಕಥೋಲಿಕ್ ಶಾಲೆ ಕಾಲೇಜುಗಳಲ್ಲಿ ದಲಿತ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶದೊಂದಿಗೆ ಅವರಿಗೆ ಬೇಕಾದ ಎಲ್ಲಾ ಸಹಾಯ ಸಹಕಾರ ನೀಡುವಂತೆ ಸೂಚಿಸಿದ್ದಾರೆ. ಈ ವಿಷಯದಲ್ಲಿ ಹೆಚ್ಚಿನ ನೆರವಿಗಾಗಿ ತಮ್ಮನ್ನು ಸಂಪರ್ಕಿಸಲು ಕೂಡಾ ದಲಿತ ವಿದ್ಯಾರ್ಥಿ ಮತ್ತು ಮತ್ತವರ ಪಾಲಕರುಗಳಿಗೆ ಸೂಚಿಸಿದ್ದರು.
ಧರ್ಮಸಭೆಯ ಮತ್ತು ಧಾರ್ಮಿಕ ಸಂಸ್ಥೆಗಳ ಎಲ್ಲಾ ಉದ್ಯೋಗಿಗಳಿಗೆ ನ್ಯಾಯಯುತ ಸಂಬಳ - ಸವಲತ್ತು ದೊರೆಯುವಂತಾಗಲು ಅವರು ಸಂಬಳ, ಪ್ರಾವಿಡೆಂಟ್ ಫಂಡ್, ಗ್ರಾಚ್ಯುಯಿಟಿ, ವೈದ್ಯಕೀಯ ಸಹಾಯ, ಆಹಾರ ಮತ್ತು ಮನೆಬಾಡಿಗೆಯ ಬಗ್ಗೆ ನೀತಿನಿಯಮಗಳನ್ನು ನಿರೂಪಿಸಿದ್ದರು.
ಘನತೆವೆತ್ತವರು ಯುವಜನರು, ಹಿರಿಯರು ಮತ್ತು ಜತನದ ಅಗತ್ಯವಿದ್ದವರನ್ನು ಪ್ರೀತಿಸಿದರು. ಬೆಂಗಳೂರು ಮಹಾ ಧರ್ಮಪ್ರಾಂತ್ಯದ ವಿಶ್ರಾಂತ ಯಾಜಕರುಗಳು ತಮ್ಮ ನಿವೃತ್ತ ಜೀವನವನ್ನು ನೆಮ್ಮದಿಯಿಂದ ಕಳೆಯುವಂತಾಗಲು ಸುಂದರ ಮತ್ತು ಪ್ರಶಾಂತವಾದ ನಿವಾಸವೊಂದನ್ನು ನಿರ್ಮಿಸಿದರು.
ಮಹಾಧರ್ಮಾಧ್ಯಕ್ಷ ಅಲ್ಫೋನ್ಸ್ ಅವರು ಅನೇಕ ಭಾಷೆಗಳಲ್ಲಿ ಪರಿಣಿತರಾಗಿದ್ದು ಅದ್ಭುತ ವಾಗ್ಮಿಯಾಗಿದ್ದಾರೆ. ಅನುಭವ ಮತ್ತು ಆಳವಾದ ಅಧ್ಯಯನದಿಂದ ದೃಢ ಸ್ವರದೊಂದಿಗೆ ನೀಡುವ ಅವರ ಪ್ರವಚನ ಮತ್ತು ಉಪದೇಶಗಳು ಕೇಳುವವರ ಮನಸ್ಸಿನಾಳಕ್ಕೆ ಇಳಿಯಬಲ್ಲವಾಗಿದ್ದವು. ಎಲ್ಲರೂ ಅರ್ಥಮಾಡಿಕೊಳ್ಳಬಲ್ಲ ಪ್ರೀತಿ, ಸರ್ವರಿಗೆ ಅನ್ವಯವಾಗುವ ಮಾನವೀಯ ಭಾಷೆ ಅವರದ್ದಾಗಿದ್ದರಿಂದಲೇ ಇದು ಸಾಧ್ಯವಾಗಿತ್ತು.
ಗಾಢ ಅಧ್ಯಯನದೊಂದಿಗೆ ವಿದ್ವಾಂಸರಾಗಿದ್ದ ಮಹಾಧಮಾಧ್ಯಕ್ಷರು ಭಾರತೀಯ ಸಂವಿಧಾನದ ಅನುಚ್ಛೇದಗಳು ಮತ್ತು ಧರ್ಮಸಭೆಯ ನೀತಿ ನಡಾವಳಿಗಳನ್ನು ಕ್ಷಣಮಾತ್ರದಲ್ಲಿ ಉಲ್ಲೇಖಿಸಬಲ್ಲವರಾಗಿದ್ದರು. ಎಂದೆಂದೂ ತಮ್ಮ ಸರಳತನ, ವಿಶ್ವಾಸಾರ್ಹತೆ, ವಿನೀತಭಾವ ಮತ್ತು ನೇರನಡೆಯನ್ನು ಅವರು ಮರೆತಿಲ್ಲ. ಧರ್ಮಾಧ್ಯಕ್ಷರು ಮಂಡಳಿಗಳ ಏಷ್ಯಾ ಒಕ್ಕೂಟದ ಸಾಮಾಜಿಕ ಸಂಪರ್ಕ ಸಮಿತಿ ಅಧ್ಯಕ್ಷರಾಗಿ, ಮನೀಲಾದ ರೇಡಿಯೊ ವೆರಿತಾಸ್ ಅಧ್ಯಕ್ಷರಾಗಿ ದುಡಿದಿದ್ದಾರೆ. ವೆಟಿಕನ್ನ ಸಾಮಾಜಿಕ ಸಂಪರ್ಕದ ಪಾಂಟಿಫಿಕಲ್ ಸಮಿತಿ ಸದಸ್ಯರಾಗಿ ಹಾಗೂ ನ್ಯಾಯ ಮತ್ತು ಶಾಂತಿಗಾಗಿನ ಮಂಡಳಿಯ ಸದಸ್ಯರಾಗಿಯೂ ಅವರು ಸೇವೆ ನೀಡಿದ್ದಾರೆ. ಅತೀ ವಂದನೀಯರು ಹೋದೆಡೆಯೆಲ್ಲಾ ದಿವ್ಯತೆಯೊಂದಿಗೆ ಜನರನ್ನು ಆಕರ್ಷಿಸಬಲ್ಲ ತಮ್ಮ ಜನ್ಮಜಾತ ಸಾಮರ್ಥ್ಯವನ್ನು ತೋರಿದ್ದಾರೆ. ಜನರನ್ನು ಸಂಪರ್ಕಿಸಿ, ಸ್ಪಂದಿಸುವ ತಮ್ಮ ವ್ಯಕ್ತಿಗತ ಗುಣದಿಂದಾಗಿ ಸಮಾಜದ ಎಲ್ಲಾ ಸ್ತರದ ಜನರೊಂದಿಗೆ ಅವರು ಅನ್ಯೋನ್ಯತೆಯಿಂದಿದ್ದರು. ತಮ್ಮ ಮಾತು ಮತ್ತು ಕೃತ್ಯಗಳಿಗಾಗಿ ಹಿರಿಯ – ಕಿರಿಯರೆನ್ನದೆ ಎಲ್ಲರಿಗೂ ಮಹಾಧರ್ಮಾಧ್ಯಕ್ಷರು ಎಂದೆಂದೂ ಆದರ್ಶರಾಗಿ ಉಳಿದಿದ್ದಾರೆ. ತಮ್ಮ ವಿವೇಚನಾ ಶಕ್ತಿ, ಸೂಕ್ಷ್ಮ ದೃಷ್ಟಿ ಮತ್ತು ಮಾನಸಿಕ ಕ್ಷಮತೆಯಿಂದ ಎಂತಹಾ ಕ್ಲಿಷ್ಟ ಸನ್ನಿವೇಶಗಳಲ್ಲಿಯೂ ಮಾನವನ ಸಹಜ ನಡವಳಿಕೆಯನ್ನು ಅರ್ಥೈಸಬಲ್ಲವರಾಗಿದ್ದರು. ಇದರಿಂದಾಗಿ ಸೂಕ್ತವಾದ ನಿರ್ಧಾರಕ್ಕೆ ಬರಲು ಮತ್ತು ಯೋಗ್ಯ ಕಾರ್ಯನೀತಿ ರೂಪಿಸಲು ಅವರಿಗೆ ಸಾಧ್ಯವಾಗುತ್ತಿತ್ತು. ಮಹಾಧರ್ಮಕ್ಷೇತ್ರದ ಜನತೆಗೆ ಅವರು ಪ್ರಿಯರಾಗುವಂತೆ ಮಾಡುವಲ್ಲಿ ಜನರೊಂದಿಗಿನ ಅವರ ಆಪ್ತತೆ ಮತ್ತು ಮುಚ್ಚುಮರೆರಹಿತ ಗುಣ ಕಾರಣವಾಗಿದ್ದವು.
ಮಹಾಧರ್ಮಾಧ್ಯಕ್ಷರು ತಮ್ಮ ಪ್ರಾಯ ಮತ್ತು ಜ್ಞಾನದ ಹೆಚ್ಚಳದೊಂದಿಗೆ ಸಾಗಿದರೂ ಯುವಜನರೊಂದಿಗಿನ ಒಡನಾಟ ಅವರಲ್ಲಿ ಸದಾ ಇತ್ತು. ಇದದಿಂದಾಗಿ ಆಂತರ್ಯದಲ್ಲಿ ಅವರು ಎಂದೆಂದೂ ತರುಣರಾಗಿಯೇ ಉಳಿದರು. ಅವರ ಹೃದಯ ಮತ್ತು ಕಾರ್ಯಕ್ರಮಗಳಲ್ಲಿ ಯುವಜನರು ಯಾವತ್ತೂ ಇದ್ದರು.
ಸಭೆ-ಸಮ್ಮೇಳನಗಳಲ್ಲಿ ಭಾಗವಹಿಸುವ ಸಲುವಾಗಿ ಅವರು ಜಗತ್ತಿನಾದ್ಯಂತ ಸಂಚರಿಸಿದರೂ ತಮ್ಮ ಕಾರ್ಯಕ್ಷೇತ್ರದ ಜನರನ್ನು ಮರೆಯಲಿಲ್ಲ. ಸದಾಕಾಲ ಅವರ ಗೆಳೆಯ ಮತ್ತು ಮಾರ್ಗದರ್ಶಕರಾಗಿಯೇ ಉಳಿದರು.
ಆರಡಿಗಿಂತಲೂ ಹೆಚ್ಚಿನ ಎತ್ತರದೊಂದಿಗೆ ಆಕರ್ಷಕ ವ್ಯಕ್ತಿತ್ವದ ಮಹಾಧರ್ಮಾಧ್ಯಕ್ಷರು ನಿಗರ್ವಿಯಾಗಿದ್ದು ತಮ್ಮ ಪಾಡಿಗೆ ಸರಳವಾಗಿ ಉಳಿದವರು. ಧರ್ಮಾಧ್ಯಕ್ಷತೆಗೆ ಸಂಬಂಧಿಸಿದ ಆಚರಣೆಗಳಲ್ಲಿ ಕಾಂತಿಯುತ ಸಡಗರ ಕಂಡರೂ, ದರ್ಬಾರು ಮತ್ತು ವೈಭವ ಅವರಿಗೆ ಎಳ್ಳಷ್ಟೂ ಸೇರುತ್ತಿರಲಿಲ್ಲ ಎಂಬುದು ಅವರನ್ನು ನಿಕಟವಾಗಿ ಬಲ್ಲವರ ಅಂಬೋಣ.
ಆರೋಗ್ಯದ ಕಾರಣಕ್ಕೆ ಅವಧಿ ಮುಂಚಿತವಾಗಿಯೇ ಅವರು ರಾಜಿನಾಮೆ ನೀಡಿರುವುದರಿಂದ ನಿವೃತ್ತಿಯವರೆಗಿನ ಅವರ ಸೇವೆ ಬೆಂಗಳೂರು ಮಹಾ ಧರ್ಮಪ್ರಾಂತ್ಯಕ್ಕೆ ತಪ್ಪಿದ್ದು ತುಂಬಾ ಬೇಸರದ ಸಂಗತಿಯಾಗಿದೆ.
ಬೆಂಗಳೂರು ಮಹಾಧರ್ಮಕ್ಷೇತ್ರದ ವಿಶ್ರಾಂತ ಮಹಾಧರ್ಮಾಧ್ಯಕ್ಷರ ಗುಣ-ವಿಶೇ಼ಷಣ, ಕಾರ್ಯವೈಖರಿಯ ಕುರಿತು ಅವರ ಶುಭವಿದಾಯ ಸಂದರ್ಭದ ಮಾನಪತ್ರದಲ್ಲಿರುವ ಈ ಮೇಲಿನವು ಕೇವಲ ಪ್ರಮುಖ ವಿಷಯಗಳಷ್ಟೇ ಆಗಿವೆ. ವಿಶ್ರಾಂತ ಮಹಾಧರ್ಮಾಧ್ಯಕ್ಷರ ಬಗ್ಗೆ ಹೇಳಬಹುದಾದ ಮತ್ತಷ್ಟು ವಿಚಾರಗಳಿವೆ. ಸ್ಥಳಾವಕಾಶದ ಮಿತಿಯ ಕಾರಣದಿಂದ ಅವನ್ನು ಇಲ್ಲಿ ಉಲ್ಲೇಖ ಮಾಡಿಲ್ಲ.
ವಿಶ್ರಾಂತ ಜೀವನದ ಆರಂಭದ ಕೆಲಕಾಲ ಅವರು ಭಾರತದ, ಆಫ್ರಿಕನ್ ಮತ್ತಿತರ ದೇಶಗಳಲ್ಲಿ ಗುರು ತರಬೇತಿ ಕೇಂದ್ರಗಳಲ್ಲಿ, ಧಾರ್ಮಿಕ ಪುರುಷ - ಸ್ತ್ರೀಯರ ಪಂಗಡಗಳಿಗೆ ತರಬೇತಿ, ಉಪನ್ಯಾಸಗಳನ್ನು ನೀಡಿದ್ದೂ ಇದೆ. ತಮ್ಮ ಆರೋಗ್ಯ ಮತ್ತಷ್ಟು ಹದಗೆಟ್ಟಾಗ ಸಂತ ಜಾನರ ರಾಷ್ಟ್ರೀಯ ಆರೋಗ್ಯ ವಿಜ್ಞಾನಗಳ ಸಂಸ್ಥೆಯ ವಠಾರಕ್ಕೆ ಅವರು ಸೀಮಿತರಾದರು. ಆರಂಭದ ವರ್ಷಗಳಲ್ಲಿ ವಠಾರದೊಳಗೆ ನಡೆದಾಡುವುದು, ಹಿರಿಯ – ಕಿರಿಯರೆನ್ನದೆ ಸಂಭಾಷಿಸುವುದು ಅವರ ನೆಚ್ಚಿನ ಹವ್ಯಾಸವಾಗಿತ್ತು. ಇತ್ತೀಚೆಗೆ ಹಿರಿವಯಸ್ಸಿನ ಕಾರಣದಿಂದಾಗಿ ಅವರು ತಮ್ಮ ವಾಸದ ಕೋಣೆಗೆ ಸೀಮಿತರಾಗಬೇಕಿದೆ. ಪತ್ರಿಕೆ - ಪುಸ್ತಕಗಳ ಓದು, ಭೇಟಿ ನೀಡಿದವರೊಂದಿಗೆ ಮತ್ತು ದೂರವಾಣಿ ಸಂಭಾಷಣೆ ಮುಂತಾದವುಗಳು ಸಾಧ್ಯವಾದಷ್ಟು ಮುಂದುವರಿದಿವೆ.
ಈ ಲೇಖಕನಿಗೆ ಮಾರ್ಗದರ್ಶಕ ಮತ್ತು ಗೆಳೆಯನಂತಿರುವ ವಿಶ್ರಾಂತ ಮಹಾಧರ್ಮಾಧ್ಯಕ್ಷರು:
ಅತೀ ವಂ. ಡಾ. ಅಲ್ಫೋನ್ಸ್ ಮಥಾಯಸ್ ಮತ್ತು ನಾನು (ಈ ಬರಹಗಾರ) ಮೂಲತ: ಪಾಂಗಾಳ ಧರ್ಮಕೇಂದ್ರದಲ್ಲಿ ಹುಟ್ಟಿ ಬೆಳೆದವರು. ಪ್ರಾಯಶ: ಒಂದು ಶತಮಾನಕ್ಕೂ ಅಧಿಕ ಕಾಲದಿಂದ ನಮ್ಮಿಬ್ಬರ ಕುಟುಂಬಗಳ ನಡುವೆ ಅನ್ಯೋನ್ಯತೆಯಿದೆ. ಪೀಳಿಗೆಗಳು ಬದಲಾದರೂ ಈ ಅನ್ಯೋನ್ಯತೆ ಇಂದೂ ಉಳಿದಿದೆ.ಚಿಕ್ಕಮಗಳೂರಿನ ಧರ್ಮಾಧ್ಯಕ್ಷ / ಬೆಂಗಳೂರು ಮಹಾಧರ್ಮಕ್ಷೇತ್ರöದ ಮಹಾಧರ್ಮಾಧ್ಯಕ್ಷರಾಗಿದ್ದಾಗ ಅವರು ಊರಿಗೆ ಆಗಮಿಸಿದ ಸಂದರ್ಭ ನಾನು ಹಲವಾರು ಭಾರಿ ಅವರನ್ನು ಭೇಟಿಯಾಗುತ್ತಿದ್ದೆ. ನಮ್ಮಿಬ್ಬರ ನಡುವೆ ಮೂರು ದಶಕಕ್ಕಿಂತ ಸ್ವಲ್ಪ ಅಧಿಕ ವಯಸ್ಸಿನ ಅಂತರವಿದೆ. ಆದರೂ ಮಿತ್ರರಂತೆ ನಮ್ಮಿಬ್ಬರ ಮಾತುಕತೆ. ನನಗೆ ಸಲಹೆ ಸೂಚನೆಗಳನ್ನು ನೀಡುತ್ತಲೂ ಇರುತ್ತಾರೆ. ಒಂದು ದೃಷ್ಟಾಂತ ನೀಡುವುದಾದರೆ – ಜಾಹೀರಾತು ಏಜನ್ಸಿ ಸಂಸ್ಥೆಯನ್ನು ಸ್ಥಾಪಿಸಿ ಸ್ವ-ಉದ್ಯೋಗ ಕೈಗೊಳ್ಳುವುದಕ್ಕಾಗಿ ಮಂಗಳೂರು ಕೆಮಿಕಲ್ಸ್ ಆ್ಯಂಡ್ ಫರ್ಟಿಲೈರ್ಸ್ ಲಿಮಿಟೆಡ್ (ಎಂಸಿಎಫ್) ಸಂಸ್ಥೆಯಲ್ಲಿ ಆಗ್ಯೆ 12 ವರ್ಷಗಳಿಂದ ನಾನು ನಿರ್ವಹಿಸುತ್ತಿದ್ದ ಉದ್ಯೋಗಕ್ಕೆ 1994ರಲ್ಲಿ ರಾಜಿನಾಮೆ ನೀಡಿದೆ. ಈ ವಿಷಯ ಅತೀ ವಂದನೀಯರ ಗಮನಕ್ಕೆ ಬಂದಾಗ ಅವರು ಶುಭ ಹಾರೈಸಿ ಆಶೀರ್ವಚಿಸಿದರಲ್ಲದೆ ನನಗೆ ಕೆಲವೊಂದು ಹಿತವಚನಗಳನ್ನೂ ನೀಡಿದರು. ಅತ್ಯುತ್ತಮವಾಗಿ ನಡೆಯುತ್ತಿದ್ದ ಅವರ ಪರಿಚಯದ ದೊಡ್ಡ ಜಾಹೀರಾತು ಸಂಸ್ಥೆಯೊಂದು ಕೆಲವು ದೊಡ್ಡ ಗ್ರಾಹಕರ ಮೋಸದಿಂದಾಗಿ ದಿವಾಳಿಯಾದ ಘಟನೆಯನ್ನು ವಿವರಿಸಿ ವ್ಯವಹಾರದಲ್ಲಿ ಜಾಗ್ರತೆಯಿಂದ ಮುನ್ನಡೆಯುವಂತೆ ಸಲಹೆ ನೀಡಿದರು. ಇಂದಿಗೂ ಅವರ ಸಲಹೆಯನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆಯನ್ನು ಮುನ್ನಡೆಸುತ್ತಿದ್ದೇನೆ.
ಅತೀ ವಂದನೀಯರು ಸಾಮಾನ್ಯ ವಿಶ್ವಾಸಿಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದರು. ಈ ಬಗ್ಗೆ ದೃಷ್ಟಾಂತವೊಂದನ್ನು ನೀಡುತ್ತಿದ್ದೇನೆ. ಮಂಗಳೂರಿನ ವಾಮಂಜೂರಿನಲ್ಲಿ ಕಾರ್ಯಾಚರಿಸುತ್ತಿರುವ ಸಂತ ಜೋಸೆಫ್ ತಾಂತ್ರಿಕ ಮಹಾವಿದ್ಯಾಲಯ (ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜ್) ಶಂಕುಸ್ಥಾಪನೆಯನ್ನು ಬೆಂಗಳೂರಿನ ವಿಶ್ರಾಂತ ಮಹಾಧರ್ಮಾಧ್ಯಕ್ಷರು ಫೆಬ್ರವರಿ 11, 2001ರಲ್ಲಿ ನೆರವೇರಿಸಿದ್ದರು. ಆ ಸಂದರ್ಭದಲ್ಲಿ ಅವರು ಹೇಳಿದ್ದರು – ವೇದಿಕೆಯಲ್ಲಿ ಕುಳಿತ ನಮಗೆ (ಧಾರ್ಮಿಕರಿಗೆ) ನೀವು ಚಪ್ಪಾಳೆ ತಟ್ಟುತ್ತಿದ್ದೀರಿ (ವೇದಿಕೆ ಮತ್ತು ಸಭಾಸ್ಥಳವನ್ನು ತೋರಿಸುತ್ತಾ). ಅದು ಹೀಗಾಗಬೇಕು. ನಾವು (ಧಾರ್ಮಿಕರು) ಅಲ್ಲಿ (ಸಭಾಸ್ಥಳದಲ್ಲಿ) ಮತ್ತು ನೀವು (ಸಾಮಾನ್ಯ ವಿಶ್ವಾಸಿಗಳು) ಇಲ್ಲಿ (ವೇದಿಕೆಯಲ್ಲಿ) ಕುಳಿತುಕೊಳ್ಳುವಂತಾಗಿ, ನಾವು ನಿಮಗೆ ಚಪ್ಪಾಳೆ ತಟ್ಟುವಂತಾಗಬೇಕು (ಆರಂಭದ 12 ವರ್ಷಗಳ ಕಾಲ ಈ ಲೇಖಕ ಕಾಲೇಜಿನ ಪ್ರಚಾರ ಸಂಬಂಧಿ ವ್ಯವಸ್ಥೆ ನಿರ್ವಹಿಸಿದ್ದರು).
ಪಾಂಗಾಳ ಧರ್ಮಕೇಂದ್ರದ ಜ್ಯುಬಿಲಿ ಮತ್ತಿತರ ದೊಡ್ಡ ಕಾರ್ಯಕ್ರಮಗಳಲ್ಲಿ ಅತೀ ವಂದನೀಯರು ತಪ್ಪದೆ ಭಾಗವಹಿಸಿದ್ದರು. 1997ರಲ್ಲಿ ಧರ್ಮಕೇಂದ್ರದ ಅಮೃತೋತ್ಸವ ಜರಗುವಾಗ ನಾನು (ಈ ಲೇಖಕ) ಧರ್ಮಕೇಂದ್ರದ ಪಾಲನಾ ಮಂಡಳಿಯ ಉಪಾಧ್ಯಕ್ಷ ಮತ್ತು ಅಮೃತೋತ್ಸವ ಸ್ಮರಣ ಸಂಚಿಕೆಯ ಸಂಪಾದಕನಾಗಿದ್ದೆ. ಆ ಸಂದರ್ಭ ಅವರು ನಮಗೆ ಸಲಹೆ ಸೂಚನೆಗಳನ್ನಿತ್ತು ಮಾರ್ಗದರ್ಶನ ನೀಡಿದ್ದರು. ಧರ್ಮಕೇಂದ್ರದಲ್ಲಿ ಹುಟ್ಟಿ ಬೆಳೆದು ಧರ್ಮಸಭೆಯಲ್ಲಿ ಸೇವೆ ನೀಡುತ್ತಿರುವ ಯಾಜಕರು, ಧಾರ್ಮಿಕ ಸಹೋದರ - ಸಹೋದರಿಯರ ದಿನಾಚರಣೆ ಕೂಟದಲ್ಲಿ ಅವರು ಸಾಮಾನ್ಯ ಯಾಜಕರಂತೆ ಭಾಗವಹಿಸಿ ಆದರ್ಶಪ್ರಾಯರಾಗಿದ್ದರು. ಪಾಂಗಾಳ ಧರ್ಮಕೇಂದ್ರದಲ್ಲಿ ಅವರು ಕಳೆದಿದ್ದ ತಮ್ಮ ಬಾಲ್ಯ ಜೀವನವನ್ನು ಅಮೃತೋತ್ಸವದ ಸಮಾರೋಪ ಸಮಾರಂಭದಲ್ಲಿ ಮೆಲುಕು ಹಾಕಿದ್ದರು. ೨೦೨೨ ಡಿಸೆಂಬರ್ನಲ್ಲಿ ಜರಗಿದ ಧರ್ಮಕೇಂದ್ರದ ಶತಮಾನೋತ್ಸವ ಸಮಾರಂಭದಲ್ಲಿ ಅನಾರೋಗ್ಯದ ಕಾರಣ ಅವರಿಗೆ ಭಾಗವಹಿಸಲು ಸಾಧ್ಯವಾಗಿರದಿದ್ದರೂ ಶುಭಾಶಯ ರೂಪದಲ್ಲಿ ಆಶೀರ್ವಚನ ನೀಡಿದ್ದರು.
ಪ್ರಮುಖ ಸಮಾರಂಭಗಳಿಗಲ್ಲದೆ ಕುಟುಂಬ ವರ್ಗದಲ್ಲಿನ ಶುಭ ಸಮಾರಂಭಗಳು, ದು:ಖದಾಯಕ ಘಟನೆಗಳು ಮತ್ತಿತರ ಅಪರೂಪದ ಸಂದರ್ಭಗಳಲ್ಲಿ ಅವರು ಹುಟ್ಟೂರಿಗೆ ಬರುತ್ತಿದ್ದರು. ಅಂತಹ ಸಂದರ್ಭಗಳಲ್ಲಿ ಹೆಚ್ಚಾಗಿ ಧರ್ಮಕೇಂದ್ರದ ಗುರುಗಳ ನಿವಾಸದಲ್ಲೇ ಅವರ ವಾಸ. ಅವರು ಅರ್ಪಿಸುವ ಬಲಿಪೂಜೆಯಲ್ಲಿ ಭಾಗವಹಿಸಲು, ತಮ್ಮ ಬಾಲ್ಯದ / ಹಿಂದಿನ ಘಟನೆಗಳನ್ನು ವಿವರಿಸಿ, ಅವುಗಳನ್ನು ಬೈಬಲ್ ವಾಕ್ಯಗಳೊಂದಿಗೆ ಸಮೀಕರಿಸಿ, ಅವರು ನೀಡುತ್ತಿದ್ದ ಪ್ರವಚನಗಳನ್ನು ಕೇಳಲು ತುಂಬಾ ಸಂತೋಷವಾಗುತ್ತಿತ್ತು.
ಬೆಂಗಳೂರಿನ ಸಂತ ಜಾನ್ ಸಂಸ್ಥೆಯಲ್ಲಿ ಜರಗಿದ್ದ ಅತೀ ವಂ. ಅಲ್ಫೋನ್ಸ್ ಮಥಾಯಸ್ ಅವರ ಧರ್ಮಾಧ್ಯಕ್ಷ ದೀಕ್ಷೆಯ ಸ್ವರ್ಣೋತ್ಸವ ಸಮಾರಂಭದ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ನಾನು ಓದಿದ್ದೆ. ಅತೀ ವಂದನೀಯರು ಅವರ ಧರ್ಮಕ್ಷೇತ್ರ ಮತ್ತು ಅಲ್ಲಿಯ ಜನರ ಬಗ್ಗೆ ಪ್ರಥಮ ಪ್ರಾಶಸ್ತ ನೀಡುತ್ತಾರೆಂದೂ, ಬೆಂಗಳೂರಿನ ಸಂತ ಜಾನ್ ಸಂಸ್ಥೆಯ ಮೇಲೆ ಅಪಾರ ಮಮತೆ ಇರುವ ಬಗ್ಗೆ ಮತ್ತು ಆ ಕಾರಣದಿಂದಲೇ ಅಲ್ಲಿ ತಮ್ಮ ವಿಶ್ರಾಂತ ಜೀವನ ಕಳೆಯಲು ಇಚ್ಛಿಸಿದ್ದಾರೆ ಎಂದೂ ಆ ವರದಿಯಲ್ಲಿ ತಿಳಿಸಲಾಗಿತ್ತು. ನಡೆದಾಡಲು ಶಕ್ತನಾಗಿರುವಷ್ಟು ಕಾಲ ಅವರು ತಮ್ಮಿಂದಾದಷ್ಟು ಸಹಾಯ - ಸಹಕಾರಗಳನ್ನು ಸಂಸ್ಥೆಗೆ ನೀಡುತ್ತಿದ್ದರು. ವಾಯುವಿಹಾರ, ನಡಿಗೆಯ ಸಮಯದಲ್ಲಿ ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು, ಸಂದರ್ಶಕರೊಂದಿಗೆ ಮಾತುಕತೆಯಾಡುತ್ತಿದ್ದರು.
ಸಂಸ್ಥೆಯ ವಿಯಾನ್ನಿ ನಿವಾಸದಲ್ಲಿ ನಾನು (ಈ ಲೇಖಕ) ಅವರನ್ನು ನಿಯಮಿತವಾಗಿ ಭೇಟಿಯಾಗುತ್ತಿರುತ್ತೇನೆ. ಅವರಿಗೆ ಹೆಚ್ಚು ಕಾಲ ಸಂಭಾಷಿಸಲು ಸಾಧ್ಯವಾದಷ್ಟು ಕಾಲ ನಾವಿಬ್ಬರೂ ಪಾಂಗಾಳದಿಂದ ತೊಡಗಿ ಅಂತಾರಾಷ್ಟ್ರೀಯ ಮಟ್ಟದವರೆಗಿನ ವಿಚಾರಗಳನ್ನು ಮಾತಾಡುತ್ತಿದ್ದೆವು. ಈಗ ಅವರಿಗೆ ಹಿಂದಿನಂತೆ ದೀರ್ಘಕಾಲ ಮಾತಾಡಲು ಸಾಧ್ಯವಾಗುವುದಿಲ್ಲ.
ಚಿಕ್ಕಮಗಳೂರು ಧರ್ಮಕ್ಷೇತ್ರ ರಚನೆಯಾಗಿ ಮತ್ತು ಅಲ್ಲಿಯ ಸ್ಥಾಪಕ ಧರ್ಮಾಧ್ಯಕ್ಷರಾಗಿ ಅತೀ ವಂದನೀಯ ಡಾ. ಅಲ್ಫೋನ್ಸ್ ಮಥಾಯಸ್ ಅವರು ಅಭಿಷೇಕಿತರಾಗಿ 60 ವರ್ಷಗಳಾಗಿವೆ. ವಜ್ರೋತ್ಸವ ಸಡಗರದ ಈ ಸಂದರ್ಭದಲ್ಲಿ ನನ್ನ ಹೃತ್ಫೂರ್ವಕ ಅಭಿನಂದನೆಗಳು. ಸ್ಥಾಪಕ ಧರ್ಮಾಧ್ಯಕ್ಷರು ಮತ್ತು ಚಿಕ್ಕಮಗಳೂರು ಧರ್ಮಕ್ಷೇತ್ರಕ್ಕೆ ಶುಭ ಹಾರೈಸುತ್ತೇನೆ. ವಿಶ್ರಾಂತ ಮಹಾ ಧರ್ಮಾಧ್ಯಕ್ಷ ಅಲ್ಫೋನ್ಸ್ ಮಥಾಯಸ್ ಅವರಿಗೆ ದೇವರು ಆಯುರಾರೋಗ್ಯ, ನೆಮ್ಮದಿ ನೀಡಿ ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
-ಎಚ್. ಆರ್. ಆಳ್ವ
- ಹೆರಾಲ್ಡ್ ರೆಜಿನಾಲ್ಡ್ ಆಳ್ವ (ಎಚ್. ಆರ್. ಆಳ್ವ)
ಮಂಗಳೂರು ಧರ್ಮಕ್ಷೇತ್ರ (ಐ)ಸಿವೈಎಂ ಅಧ್ಯಕ್ಷ (1981-84)
ಮಂಗಳೂರು ಧರ್ಮಕ್ಷೇತ್ರ ಪಾಲನಾ ಪರಿಷತ್ ಕಾರ್ಯದರ್ಶಿ (1986-91)
ಪಾಂಗಾಳ ಧರ್ಮಕೇಂದ್ರ ಪಾಲನಾ ಪರಿಷತ್ ಕಾರ್ಯದರ್ಶಿ (1991-94)
ಪಾಂಗಾಳ ಧರ್ಮಕೇಂದ್ರ ಪಾಲನಾ ಪರಿಷತ್ ಉಪಾಧ್ಯಕ್ಷ (1994-97)
ಹವ್ಯಾಸಿ ಲೇಖಕರುಈ ಲೇಖನದಲ್ಲಿ ಉಪಯೊಗಿಸಿರುವ ಕೆಲವು ಛಾಯಾಚಿತ್ರಗಳು ಲೇಖಕರ ಸಂಗ್ರಹದಿಂದ ಮತ್ತುಳಿದವು ನಾನಾ ಮೂಲಗಳಿಂದ