ಚೆನ್ನೈ, ಮೇ 16 (Daijiworld News/MSP): "ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಒಬ್ಬ ಹಿಂದೂ ಆಗಿದ್ದ. ರಾಷ್ಟ್ರಪಿತ ಮಹಾತ್ಮ ಗಾಂಧಿಯ ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆಯೇ ಮೊದಲ ಭಯೋತ್ಪಾದಕ " ಎಂದು ಮಕ್ಕಳ ನೀದಿ ಮಯ್ಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಹೇಳಿದ ಮಾತನ್ನು ಮತ್ತೆ ಸಮರ್ಥಿಸಿಕೊಂಡಿದ್ದಾರೆ. ನಾನು ಐತಿಹಾಸಿಕ ಸತ್ಯವನ್ನೇ ನುಡಿದಿದ್ದೇನೆ. ಅದು ಬಿಟ್ಟರೆ ಇನ್ಯಾರೊಂದಿಗೋ ಜಗಳ ಮಾಡಲೆಂದು ನಾನು ಈ ಹೇಳಿಕೆ ನೀಡಲಿಲ್ಲ ಎಂದು ಹೇಳಿದ್ದಾರೆ.
ಹಿಂದೂ ಉಗ್ರ ಹೇಳಿಗೆ ವಿವಾದದ ಸ್ವರೂಪ ಪಡೆದುಕೊಂಡ ಹಿನ್ನಲೆಯಲ್ಲಿ , ಮಾತನಾಡಿದ ಅವರು " ನಾನು ಕೇವಲ ದಾಖಲಾಗಿರುವ ಸತ್ಯಗಳನ್ನಷ್ಟೇ ಪ್ರಸ್ತತಪಡಿಸಿದ್ದೇನೆ ಅಷ್ಟೇ. ನಾನು ಹೇಳಿದ್ದು ಐತಿಹಾಸಕ ಸತ್ಯವನ್ನು. ನಾನು ಒಂದು ಮತವನ್ನು ಹೇಗೆ ಗುರಿಯಾಗಿಸಿಕೊಳ್ಳಲಿ? ನನ್ನ ಹೇಳಿಕೆಯನ್ನು ವಿಚಾರದ ಹೊರಗೆ ಕೊಂಡೊಯ್ಯಲಾಗಿದೆ. ನಾನು ಯಾವ ಹೇಳಿಕೆ ನೀಡಿದ್ದೇನೋ ಅದರ ಅದರ ತಲೆ ಮತ್ತು ಬಾಲವನ್ನು ಕತ್ತರಿಸಿ ಬರೀ ಒಂದು ಭಾಗವನ್ನು ಮಾತ್ರ ಬಿತ್ತರಿಸಲಾಗಿದೆ" ಎಂದು ಮಾಧ್ಯಮಗಳ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.
ಹಿಂದೂ ಉಗ್ರ ಎಂಬ ಕಮಲ್ ಹೇಳಿಕೆಯ ವಿರುದ್ದ ಅರವಕುರಿಚಿಯಲ್ಲಿ ಸೋಮವಾರ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ಈ ನಡುವೆ ಮದ್ರಾಸ್ ಹೈ ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮನವಿ ಸಲ್ಲಿಸಿದ್ದಾರೆ.