ಬೆಂಗಳೂರು, ಜು. 12(DaijiworldNews/AA): 16ನೇ ವಿಧಾನಸಭೆಯ 4ನೇ ಮುಂಗಾರು ಅಧಿವೇಶನವು ಜುಲೈ 15 ರಿಂದ ಜು 26ರವರೆಗೆ ನಡೆಯಲಿದೆ. ಈ ಬಾರಿಯೂ ಸಭೆಗೆ ಬೇಗ ಹಾಜರಾಗುವ ಶಾಸಕರಿಗೆ ಟೀ ಕಪ್ ಸಿಗಲಿದೆ ಎಂದು ಸಭಾಧ್ಯಕ್ಷ ಯು.ಟಿ ಖಾದರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಯು.ಟಿ.ಖಾದರ್ ಹಾಗೂ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಯು.ಟಿ.ಖಾದರ್ ಅವರು, ಒಟ್ಟು 9 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಈ ಸಂದರ್ಭ ಪ್ರಶ್ನೋತ್ತರ ಕಲಾಪವನ್ನು ನಿಗದಿಪಡಿಸಲಾಗಿದೆ. ಅಧಿವೇಶನದಲ್ಲಿ ಸರ್ಕಾರದಿಂದ ಸ್ವೀಕರಿಸಲಾಗುವ ವಿಧೇಯಕಗಳನ್ನ ಪರ್ಯಾಲೋಚನೆಗೆ ಹಾಗೂ ಅಂಗೀಕಾರಕ್ಕೆ ತೆಗೆದುಕೊಳ್ಳಲಾಗುವುದು. ಪ್ರಶ್ನೋತ್ತರ ಕಲಾಪದೊಂದಿಗೆ ಗಮನ ಸೆಳೆಯುವ ಸೂಚನೆ, ಶೂನ್ಯವೇಳೆ, ನಿಲುವಳಿ ಸೂಚನೆ, ನಿಯಮ 69ರ ಸೂಚನೆಗಳು, ಖಾಸಗಿ ಸದಸ್ಯರುಗಳ ಕಾರ್ಯಕ್ರಮಗಳನ್ನ ನಡೆಸಲಾಗುವುದು ಎಂದು ತಿಳಿಸಿದರು.
2024-24ನೇ ಸಾಲಿನ ವಿಧಾನ ಮಂಡಲ, ವಿಧಾನ ಸಭೆಯ ಸ್ಥಾಯಿ ಸಮಿತಿಗಳ ಅವಧಿ ಆಗಸ್ಟ್ 8ರಂದು ಮುಕ್ತಾಯಗೊಳ್ಳಲಿದೆ. ಹೀಗಾಗಿ 2024-25ನೇ ಸಾಲಿಗೆ ಹೊಸದಾಗಿ ಸಮಿತಿಗಳನ್ನ ರಚಿಸುವ ಸಂಬಂಧ ಚುನಾವಣಾ ಪ್ರಸ್ತಾವವನ್ನ ಮಂಡಿಸಿ, ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಇನ್ನು ಸಭೆಗೆ ಬೇಗ ಹಾಜರಾಗುವ ಶಾಸಕರಿಗೆ ಟೀ ಕಪ್ ನೀಡಲಾಗುತ್ತದೆ. ಕಳೆದ ಭಾರೀ ನೀಡಿದ ಅವಕಾಶ ಈ ಭಾರಿಯೂ ನೀಡುತ್ತೇವೆ. ಇಡೀ ದಿನ ಇರುವ ಸದಸ್ಯರುಗಳಿಗೆ ವಿಶೇಷ ಅವಕಾಶ ನೀಡಲಾಗುತ್ತೆ. ಅವರು ಎಷ್ಟು ಹೊತ್ತಿಗೆ ಬರುತ್ತಾರೆ, ಹೋಗುತ್ತಾರೆ ಎಂಬುದನ್ನು ಗಮನದಲ್ಲಿ ಇರಿಸಿಕೊಂಡು ಅವಕಾಶ ನೀಡುತ್ತೇವೆ. ಜು.20ರಂದು ವಿಧಾನಮಂಡಲ ಕಪ್ ಅನ್ನು ನೀಡುತ್ತೇವೆ. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರು ಭಾಗಿಯಾಗಬಹುದು. ಕಲಾಪ ವೀಕ್ಷಣೆಗೆ ಬರುವ ಮಕ್ಕಳು, ವಿದ್ಯಾರ್ಥಿಗಳಿಗೆ ಎಂದಿನಂತೆ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿ ಆ್ಯಪ್ ಮಾಡುತ್ತೇವೆ. ವಿಧಾನಸೌಧದ ಯಾವ ಕೊಠಡಿಯಲ್ಲಿ ಯಾವ ಸಚಿವರು ಇದ್ದಾರೆ, ಕೊಠಡಿ ಸಂಖ್ಯೆ, ಇಲಾಖೆಯ ಹೆಸರು, ವಿಧಾನಸೌಧದ ಸಂಪೂರ್ಣ ಮಾಹಿತಿ ಆ ಆ್ಯಪ್ ನಲ್ಲಿ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ ಎಂದರು.