ಬೆಂಗಳೂರು,ಮೇ16(DaijiworldNews/AZM):ಕೈಗೆ ಬಳೆತೊಟ್ಟುಕೊಳ್ಳಿ ಎಂದು ಸಿದ್ಧರಾಮಯ್ಯನವರಿಗೆ ಹೇಳಿದ ಶೋಭಾ ಅವರಿಗೆ ಸಿದ್ದು ತಿರುಗೇಟು ನೀಡಿದ್ದಾರೆ.
"ನೀವೂ ಒಬ್ಬ ಹೆಣ್ಣಾಗಿ ಹೆಣ್ಣು ಸಂಕುಲವೇ ಅಸಮರ್ಥ ಎಂಬಂತೆ ಕೀಳು ಹೇಳಿಕೆ ನೀಡಬೇಡಿ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ. "ಕುಮಾರಿ ಶೋಭಾ ಕರಂದ್ಲಾಜೆ ಅವರೇ, ಓರ್ವ ಹೆಣ್ಣಾಗಿ ತಾವು ಮಹಿಳಾ ಸಂಕುಲವೇ ಅಸಮರ್ಥರು ಎಂಬಂತೆ ಕೀಳು ಹೇಳಿಕೆ ನೀಡಿರುವುದು ಸರಿಯಲ್ಲ. ಸಂಸದರಾಗಿ ತಾವೊಬ್ಬರು ಸರಿಯಾಗಿ ಕೆಲಸ ಮಾಡಿಲ್ಲ ಎಂಬ ಮಾತ್ರಕ್ಕೆ ಬಳೆ ತೊಟ್ಟವರೆಲ್ಲ ಕೆಲಸ ಮಾಡಲಾಗದವರು ಎಂದಲ್ಲ. ನೆನಪಿರಲಿ, ಚೆನ್ನಮ್ಮ,ಓಬವ್ವ, ಇಂದಿರಾಗಾಂಧಿ ಇವರೆಲ್ಲ ಬಳೆ ತೊಟ್ಟೆ ಸಾಧನೆಯ ಉತ್ತುಂಗಕ್ಕೇರಿದವರು" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
"ನಿಮ್ಮ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ನಿಮ್ಮ ಕೆಲಸ. ಅವರನ್ನು ಹಿಡಿದಿಟ್ಟುಕೊಳ್ಳಲು ಆಗದ ನೀವು ದುರ್ಬಲರು. ಕೆಲಸ ಮಾಡಲು ಸಾಧ್ಯವಾಗದಿದ್ದರೆ ಕೈಗೆ ಬಳೆ ಹಾಕಿಕೊಳ್ಳಿ" ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ನಾಯಕಿ, ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದರು.