ಹೊಸದಿಲ್ಲಿ,ಮೇ16(DaijiworldNews/AZM):ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ 2002 ಅನ್ವಯ ಹೀರಾ ಗ್ರೂಪ್ ನಿರ್ದೇಶಕಿ ನೌಹೇರಾ ಶೇಖ್, ಮೊಲ್ಲಿ ಥಾಮಸ್ ಮತ್ತು ಬಿಜು ಥಾಮಸ್ ಅವರನ್ನು ಜಾರಿ ನಿರ್ದೇಶನಾಲಯ ಏಳು ದಿನಗಳ ಕಾಲ ತನ್ನ ವಶಕ್ಕೆ ಪಡೆದುಕೊಂಡಿದೆ.
ಆರೋಪಿಗಳನ್ನು ಹೈದರಾಬಾದ್ ನ ಮೆಟ್ರೋಪಾಲಿಟನ್ ಸೆಶನ್ಸ್ ನ್ಯಾಯಾಲಯ ಹಾಗೂ ಎಂಎಸ್ ಜೆ ನ್ಯಾಯಾಲಯದೆದುರು ಹಾಜರುಪಡಿಸಲಾಗಿದ್ದು, ಮೇ 15ರಂದು ಅನ್ವಯವಾಗುವಂತೆ ಮೂವರನ್ನೂ ಏಳು ದಿನಗಳ ಕಸ್ಟಡಿಗೆ ವಹಿಸಲಾಗಿದೆ.
ತೆಲಂಗಾಣ ಪೊಲೀಸರು ದಾಖಲಿಸಿದ ಎಫ್ಐಆರ್ ಆಧಾರದಲ್ಲಿ ಮೂವರು ಆರೋಪಿಗಳ ವಿರುದ್ಧ ಹಾಗೂ ಹೀರಾ ಸಮೂಹ ಕಂಪೆನಿಗಳ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.
ಗೋಲ್ಡ್ ಟ್ರೇಡಿಂಗ್ ಮೂಲಕ ಶೇ. 36ರಷ್ಟು ಹೆಚ್ಚು ಗಳಿಕೆಯ ಆಮಿಷ ತೋರಿಸಿ ಲಕ್ಷಗಟ್ಟಲೆ ಜನರಿಂದ ವಂಚನೆಯಿಂದ ಹೂಡಿಕೆಗಳನ್ನು ಹೀರಾ ಗ್ರೂಪ್ ಪಡೆದಿತ್ತೆಂಬ ಆರೋಪವಿದೆ. ಆದರೆ ಹೂಡಿಕೆ ಮಾಡಿದ ಮೊತ್ತ ಹಾಗೂ ಲಾಭವನ್ನೂ ಗ್ರಾಹಕರಿಗೆ ಕಂಪೆನಿ ನೀಡಲು ವಿಫಲವಾದ ನಂತರ ದೂರುಗಳು ದಾಖಲಾಗಿದ್ದವು.
ಕಂಪೆನಿ ರೂ 3,000 ಕೋಟಿಗೂ ಅಧಿಕ ಹಣವನ್ನು 1,72,114 ಹೂಡಿಕೆದಾರರಿಂದ ಸಂಗ್ರಹಿಸಿತ್ತು ಎಂದು ತನಿಖೆಯ ವೇಳೆ ತಿಳಿದು ಬಂದಿತ್ತು. ಕಂಪೆನಿಯಿಂದ ಮೋಸ ಹೋದವರ ಪೈಕಿ ಹೈದರಾಬಾದ್, ತೆಲಂಗಾಣ, ಕೇರಳ, ಹಾಗೂ ಸೌದಿ, ಸಂಯುಕ್ತ ಅರಬ್ ಸಂಸ್ಥಾನ ಮತ್ತು ಮಧ್ಯ ಪೂರ್ವ ದೇಶಗಳಲ್ಲಿರುವ ಅನಿವಾಸಿ ಭಾರತೀಯರೂ ಸೇರಿದ್ದರು.