ಬೆಂಗಳೂರು, ಜು. 15(DaijiworldNews/AA): ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಪ್ರಕರಣದಲ್ಲಿ ಸಿಲುಕಿರುವ ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್ ಇಂದು ಪ್ರತ್ಯಕ್ಷವಾಗಿದ್ದು, ವಿಧಾನಸಭಾ ಕಲಾಪಕ್ಕೆ ಹಾಜರಾಗಿದ್ದಾರೆ.
ಈ ವೇಳೆ ಮಾಧ್ಯಮಗಳ ಪ್ರಶ್ನೆಗೆ ನನಗೆ ಎಸ್ಐಟಿ ನೋಟಿಸ್ ನೀಡಿಲ್ಲ. ಇಡಿಯಿಂದಲೂ ನನಗೆ ನೋಟಿಸ್ ಬಂದಿಲ್ಲ. ನಾನು ಅಧಿವೇಶನಕ್ಕೆ ತೆರಳುತ್ತಿದ್ದೇನೆ ಎಂದಿದ್ದಾರೆ
ವಿಧಾನಸೌಧಕ್ಕೆ ಆಗಮಿಸಿದ ಬಳಿಕ ದದ್ದಲ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಆಡಳಿತ ಪಕ್ಷದ ಕೊಠಡಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ವಾಲ್ಮೀಕಿ ನಿಗಮ ಹಗರಣ ಪ್ರಕರಣದ ತನಿಖೆಯ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಇಡಿ ದದ್ದಲ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಇದೀಗ ದದ್ದಲ್ ಅವರು ವಿಚಾರಣೆಗೆ ಹಾಜರಾಗದೇ ಕಲಾಪಕ್ಕೆ ಹಾಜರಾಗಿದ್ದಾರೆ. ಇನ್ನು ಕಲಾಪ ನಡೆಯುವಾಗ ಶಾಸಕರನ್ನು ಬಂಧಿಸಬೇಕಾದರೆ ಸ್ಫೀಕರ್ ಅನುಮತಿ ಕಡ್ಡಾಯವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ಕಲಾಪ ನಡೆಯುವಾಗ ಸ್ಪೀಕರ್ ಬಂಧಿಸಲು ಅನುಮತಿ ನೀಡದೇ ಹೋದಲ್ಲಿ ದದ್ದಲ್ ಅವರನ್ನು ಬಂಧಿಸಲು ಸಾಧ್ಯವಿಲ್ಲ. ಹೀಗಿರುವಾಗ ಇಡಿ ದದ್ದಲ್ ಅವರನ್ನು ಬಂಧಿಸಲು ಏನು ಮಾಡಲಿದೆ ಎಂದು ಕುತೂಹಲ ಮೂಡಿದೆ.