ಬೆಂಗಳೂರು, ಮೇ16(Daijiworld News/SM): ಡ್ರಗ್ಸ್ ದಂಧೆ ಮೂಲಕ ಪರಸ್ಪರ ಸ್ನೇಹಿತರಾದ ಕೇರಳದ ಮೂವರು ವಿದ್ಯಾರ್ಥಿಗಳು ಬೆಂಗಳೂರಿಗೆ ಗಾಂಜಾ ಮಾರಲು ಬಂದು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಶ್ಯಾಮ್ದಾಸ್ (25), ಆರಿಷ್ ಕುಮಾರ್ (24) ಹಾಗೂ ಜಿಬಿನ್ ಜಾನ್ (21) ಬಂಧಿತ ವಿದ್ಯಾರ್ಥಿಗಳು.
ಬಂಧಿತರಿಂದ ಪೊಲೀಸರು, 4.66 ಲಕ್ಷ ಮೌಲ್ಯದ 23 ಕೆ.ಜಿ ಗಾಂಜಾ ಹಾಗೂ ತೂಕದ ಯಂತ್ರಗಳನ್ನು ಜಪ್ತಿ ಮಾಡಿದ್ದಾರೆ. ಇವರ ಸಹಚರರಾದ ಆವಲಹಳ್ಳಿಯ ಗೋಕುಲ್ ಹಾಗೂ ಅರೋಮನ್ ತಲೆಮರೆಸಿಕೊಂಡಿದ್ದಾರೆ.
ಮಾದಕ ವ್ಯಸನಿಗಳೂ ಆಗಿರುವ ಇವರು, ಡ್ರಗ್ಸ್ ಖರೀದಿಗೆ ಹಾಗೂ ಪಾರ್ಟಿಗಳಿಗೆ ಹೋಗಲು ಹಣಕ್ಕಾಗಿ ಪೆಡ್ಲರ್ (ಡ್ರಗ್ಸ್ ಪೂರೈಕೆದಾರರು) ಆಗಿಯೂ ಕೆಲಸ ಮಾಡುತ್ತಿದ್ದರು. ಕೇರಳ ಹಾಗೂ ವಿಶಾಖಪಟ್ಟಣದ ವ್ಯಕ್ತಿಗಳಿಂದ ಗಾಂಜಾ ತಂದು, ಅದನ್ನು ಆವಲಹಳ್ಳಿಯ ಗೋಕುಲ್ನ ಮನೆಯಲ್ಲಿ ಇಡುತ್ತಿದ್ದರು. ನಂತರ ಸಣ್ಣ ಸಣ್ಣ ಪೊಟ್ಟಣ ಮಾಡಿ ನಗರದ ವಿದ್ಯಾರ್ಥಿಗಳು ಹಾಗೂ ಸಾಫ್ಟ್ವೇರ್ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಈ ಮೂರು ವಿದ್ಯಾರ್ಥಿಗಳ ಬಗ್ಗೆ ಖಚಿತ ಮಾಹಿತಿ ಪಡೆದ ಇನ್ಸ್ಪೆಕ್ಟರ್ ಮಹಮದ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿದಿದೆ.