ರಾಜಸ್ಥಾನ, ಜು 17(DaijiworldNews/MS): ಪರಿ ಬಿಷ್ಣೋಯ್ ಅವರು ಮೂರನೇ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದರು. ಅವರ ತಾಯಿ ಇನ್ಸ್ಪೆಕ್ಟರ್ ಮತ್ತು ತಂದೆ ವಕೀಲರು. ಇಂತಹ ಮನೆತನದಲ್ಲಿ ಹುಟ್ಟಿದ್ದ ಪರಿ ಅವರ ಐಎಎಸ್ ಅಧಿಕಾರಿ ಅಗುವ ತನಕ ಪಯಣ ಹೇಗಿತ್ತು ಅನ್ನುವುದು ತಿಳಿಯೋಣ ಬನ್ನಿ.
IAS ಪರಿ ಬಿಷ್ಣೋಯ್ ಅವರು 26 ಫೆಬ್ರವರಿ 1996 ರಂದು ರಾಜಸ್ಥಾನದ ಬಿಕಾನೇರ್ನಲ್ಲಿ ಜನಿಸಿದರು. ಅವರ ತಂದೆ ಮಣಿರಾಮ್ ಬಿಷ್ಣೋಯ್ ವಕೀಲರು ಮತ್ತು ತಾಯಿ ಸುಶೀಲಾ ಬಿಷ್ಣೋಯ್ ಅಜ್ಮೀರ್ ನಲ್ಲಿ ಜಿಆರ್ ಪಿ ಪೊಲೀಸ್ ಅಧಿಕಾರಿ.
ತಂದೆ-ತಾಯಿ ಇಬ್ಬರೂ ಪರಿಯನ್ನು ಬಾಲ್ಯದಿಂದಲೂ ಪ್ರೋತ್ಸಾಹಿಸಿದ್ದರು. ಅದರಿಂದ ಪರಿ ಬಿಷ್ಣೋಯ್ ಅವರ ಸಮುದಾಯದ ಮೊದಲ ಮಹಿಳಾ ಐಎಎಸ್ ಅಧಿಕಾರಿಯಾಗಿದ್ದಾರೆ.
ಪರಿ ಬಿಷ್ಣೋಯ್ ಯುಪಿಎಸ್ಸಿ ಪರೀಕ್ಷೆಗೆ ಮೂರು ಬಾರಿ ಪ್ರಯತ್ನಿಸಿದ್ದರು. ಅವರು NET-JRF ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು. ಐಎಎಸ್ ಪರಿ ಬಿಷ್ಣೋಯ್ ಅವರು ಅಜ್ಮೀರ್ ನಲ್ಲಿರುವ ಸೇಂಟ್ ಮೇರಿ ಕಾನ್ವೆಂಟ್ ಶಾಲೆಯಲ್ಲಿ ಓದಿದ್ದಾರೆ. 12ನೇ ತರಗತಿಯಲ್ಲಿಯೇ ಐಎಎಸ್ ಅಧಿಕಾರಿಯಾಗಬೇಕು ಎಂದು ಅವರು ನಿರ್ಧರಿಸಿದ್ದರು.
ಪಿಯುಸಿ ನಂತರ ದೆಹಲಿಗೆ ಬಂದರು. ದೆಹಲಿ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ಅವರು ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ಆರಂಭಿಸಿದರು. ಅವರು ಅಜ್ಮೀರ್ ನ MDS ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಅಂತಿಮವಾಗಿ, 2019 ರಲ್ಲಿ, ಅವರು UPSC ಪರೀಕ್ಷೆಯ ಮೂರನೇ ಪ್ರಯತ್ನದಲ್ಲಿ 30 ನೇ ಶ್ರೇಣಿಯೊಂದಿಗೆ ಯಶಸ್ವಿಯಾದರು.