ಮಥುರಾಪುರ್, ಮೇ16(Daijiworld News/SS): ನಮ್ಮ ವಿರುದ್ಧದ ಆರೋಪವನ್ನು ಸಾಬೀತುಪಡಿಸಲು ಸಾಧ್ಯವಾದರೆ ಸಾಬೀತುಪಡಿಸಿ, ಇಲ್ಲದಿದ್ದರೆ ನಾವು ನಿಮ್ಮನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಪ್ರಧಾನಿ ವಿರುದ್ಧ ದೀದಿ (ಮಮತಾ ಬ್ಯಾನರ್ಜಿ) ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಈಶ್ವರಚಂದ್ರ ಬಂಡೋಪಾಧ್ಯಾಯ ವಿದ್ಯಾಸಾಗರ ಅವರ ಭವ್ಯವಾದ ಮೂರ್ತಿಯನ್ನು ಮರುಸ್ಥಾಪಿಸುವುದಾಗಿ ಹೇಳಿದ್ದಾರೆ. ಬಂಗಾಳ ಸರ್ಕಾರದಲ್ಲಿ ಪ್ರತಿಮೆ ಸ್ಥಾಪಿಸುವಷ್ಟು ಹಣವಿದೆ. ಆದರೆ, 200 ವರ್ಷ ಹಳೆಯ ಪರಂಪರೆಯನ್ನು ಮರಳಿ ಕೊಡಲು ನಿಮಗೆ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರೇ ಹಿಂಸಾಚಾರ ನಡೆಸಿದರು ಎಂಬುದಕ್ಕೆ ನಮ್ಮ ಬಳಿ ಪುರಾವೆ ಇದೆ. ಆದರೆ ನೀವು ಟಿಎಂಸಿ ಹಿಂಸಾಚಾರಕ್ಕೆ ಕಾರಣ ಎಂದು ಹೇಳುತ್ತಿದ್ದೀರಿ. ನಿಮಗೆ ನಾಚಿಕೆಯಾಗುವುದಿಲ್ಲವೆ. ನೀವು ಸುಳ್ಳುಗಾರ. ನಮ್ಮ ವಿರುದ್ಧದ ಆರೋಪವನ್ನು ಸಾಬೀತುಪಡಿಸಲು ಸಾಧ್ಯವಾದರೆ ಸಾಬೀತುಪಡಿಸಿ, ಇಲ್ಲದಿದ್ದರೆ ನಾವು ನಿಮ್ಮನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಪ್ರಧಾನಿ ವಿರುದ್ಧ ದೀದಿ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ನಮ್ಮ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ನರೇಂದ್ರ ಮೋದಿ ಅವರ ಸಭೆಯ ಬಳಿಕ ನಾವು ಯಾವುದೇ ಸಭೆ ನಡೆಸುವಂತಿಲ್ಲ. ಚುನಾವಣಾ ಆಯೋಗ ಬಿಜೆಪಿಯ ಸಹೋದರನಿದ್ದಂತೆ. ಈ ಮೊದಲು ಚುನಾವಣಾ ಆಯೋಗ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತಿತ್ತು. ಆದರೆ ಈಗ ಚುನಾವಣಾ ಆಯೋಗ ಬಿಜೆಪಿಗೆ ಮಾರಾಟವಾಗಿದೆ ಎಂದು ದೂರಿದರು.