ಅಸ್ಸಾಂ, ಮೇ16(Daijiworld News/SS): ಇಲ್ಲಿನ ಹೈಲಕಂಡಿ ಜಿಲ್ಲೆಯಲ್ಲಿ ಕರ್ಪ್ಯೂ ವಿಧಿಸಿದ್ದರೂ ಕೂಡ ಅದನ್ನು ಲೆಕ್ಕಿಸದೇ ಹೆರಿಗೆ ನೋವಿನಿಂದ ಬಳಲುತ್ತಿದ್ದ ಹಿಂದು ಮಹಿಳೆಯನ್ನು ಮುಸ್ಲಿಂ ಆಟೋ ಚಾಲಕನೊಬ್ಬ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾನೆ.
ಕಳೆದ ಆರು ದಿನಗಳ ಹಿಂದೆ ಹೈಲಕಂಡಿಯಲ್ಲಿ ನಡೆದ ಕೋಮು ಹಿಂಸಾಚಾರ ಹಿನ್ನೆಲೆಯಲ್ಲಿ ಹೈಲಕಂಡಿ ಜಿಲ್ಲೆಯಲ್ಲಿ ಕರ್ಪ್ಯೂ ಹೇರಲಾಗಿತ್ತು. ಈ ವೇಳೆ ಹೈಲಕಂಡಿ ಜಿಲ್ಲೆಯ ನಿವಾಸಿ ನಂದಿತಾ ಎಂಬುವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಪತಿ ರುಬಿನ್ ದಾಸ್ ಅವರಿಗೆ ಗ್ರಾಮದಲ್ಲಿ ಹಾಕಿದ್ದ ಕರ್ಪ್ಯೂನಿಂದ ಆಂಬುಲೆನ್ಸ್ ವ್ಯವಸ್ಥೆ ಮಾಡಲು ಸಾಧ್ಯವಾಗಿರಲಿಲ್ಲ.
ಈ ವೇಳೆ ನೋವಿನಿಂದ ಬಳಲುತ್ತಿದ್ದ ನಂದಿತಾರನ್ನು ಆಸ್ಪತ್ರೆಗೆ ದಾಖಲಿಸಲು ಸ್ಥಳೀಯ ಮುಸ್ಲಿಂ ವ್ಯಕ್ತಿ ಮಕ್ಬೂಲ್ ಮುಂದೆ ಬಂದಿದ್ದಾರೆ. ಮಾತ್ರವಲ್ಲ, ಕರ್ಪ್ಯೂವನ್ನು ಲೆಕ್ಕಿಸದೇ ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಕರ್ಪ್ಯೂ ಹೊರತಾಗಿಯೂ ಸೂಕ್ತ ಸಮಯದಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿದ ಆಟೋ ಚಾಲಕ ಮಕ್ಬೂಲ್ ಅವರ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.