ಕಾಸರಗೋಡು, ಮೇ 16 (Daijiworld News/SM): ನಕಲಿ ಮತದಾನ ನಡೆದ ಕಾಸರಗೋಡು ಲೋಕಸಭಾ ಕ್ಷೇತ್ರದ ಮೂರು ಮತ್ತು ಕಣ್ಣೂರು ಲೋಕಸಭಾ ಕ್ಷೇತ್ರದ ಒಂದು ಮತಗಟ್ಟೆಯಲ್ಲಿ ಮೇ 19ರಂದು ಮರುಮತದಾನ ನಡೆಯಲಿದೆ.
ಕಾಸರಗೋಡು ಲೋಕಸಭಾ ಕ್ಷೇತ್ರದ ಕಲ್ಯಾಶ್ಯೆರಿಯ 19ನೇ ಪಿಲಾತ್ತರ, 69ನೇ ಮತಗಟ್ಟೆ, 70ನೇ ನಂಬ್ರದ ಮತಗಟ್ಟೆ, ಕಣ್ಣೂರು ಲೋಕಸಭಾ ಕ್ಷೇತ್ರದ ತಳಿಪರಂಬ 166ನೇ ಮತಗಟ್ಟೆಯಲ್ಲಿ ಮೇ 19ರಂದು ಮರು ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ತೀರ್ಮಾನಿಸಿದೆ.
ಈ ನಾಲ್ಕು ಮತಗಟ್ಟೆಗಳಲ್ಲಿ ಏಪ್ರಿಲ್ 23ರಂದು ನಡೆದ ಚುನಾವಣೆಯನ್ನು ಚುನಾವಣಾ ಆಯೋಗ ರದ್ದುಗೊಳಿಸಿದೆ. ಹಾಗೂ ಮೇ 19ರಂದು ಮರು ಮತದಾನದ ಆದೇಶ ಹೊರಡಿಸಿದೆ. ಅಂದು ಬೆಳಿಗ್ಗೆ 7ರಿಂದ ಸಂಜೆ 4ರ ತನಕ ಮತದಾನ ನಡೆಯಲಿದೆ. ನಾಳೆ ಸಂಜೆ ಐದು ಗಂಟೆ ತನಕ ಬಹಿರಂಗ ಪ್ರಚಾರಕ್ಕೆ ಅವಕಾಶ ನೀಡಲಾಗಿದೆ.
ಈ ಮತಗಟ್ಟೆಗಳಲ್ಲಿ ನಕಲಿ ಮತದಾನ ನಡೆದಿರುವುದು ಚುನಾವಣಾ ಆಯೋಗ ಪತ್ತೆಹಚ್ಚಿತ್ತು. ಪಿಲಾತ್ತರ 19ನೇ ಮತಗಟ್ಟೆಯಲ್ಲಿ ಮೂವರು ಸಿಪಿಎಂ ಕಾರ್ಯಕರ್ತರು ನಕಲಿ ಮತದಾನ ಮಾಡುತ್ತಿರುವ ದೃಶ್ಯ ಸಹಿತ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಬಳಿಕ ಉಳಿದ ಮೂರು ಮತಗಟ್ಟೆಗಳಲ್ಲಿ ನಕಲಿ ಮತದಾನ ನಡೆದಿರುವ ಬಗ್ಗೆ ಸಿಪಿಎಂ ಕೂಡ ಆಯೋಗಕ್ಕೆ ದೂರು ನೀಡಿತ್ತು.
ಬಳಿಕ ದೃಶ್ಯಗಳನ್ನು ಪರಿಶೀಲಿಸಿದ ಚುನಾವಣಾ ಆಯೋಗ ಈ ನಾಲ್ಕು ಮತಗಟ್ಟೆಗಳಲ್ಲಿ ಮರು ಮತದಾನ ನಡೆಸಲು ಆಯೋಗ ತೀರ್ಮಾನಿಸಿದೆ.