ಬಳ್ಳಾರಿ, ಜು.21(DaijiworldNews/AA): ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಒಂಟಿಯಾಗಿದ್ದಾರೆ. ಸಿಎಂ ಸುದ್ದಿಗೋಷ್ಠಿ ಮಾಡಿದಾಗ ಅವರ ಪಕ್ಕದಲ್ಲಿ ಕುಳಿತುಕೊಳ್ಳಲು ಅವರದೇ ಪಕ್ಷದ ನಾಯಕರು, ಮಂತ್ರಿಗಳು ಹಿಂಜರಿಯುತ್ತಿದ್ದಾರೆ. ಜೊತೆಗೆ ವಿಧಾನಸಭೆಯಲ್ಲೂ ಸಿಎಂ ಒಂಟಿಯಾಗಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಏನಾದರು ಮಾತನಾಡಿದರೆ ಅದನ್ನು ಬೆಂಬಲಿಸಲು ಯಾವ ಶಾಸಕರು, ಸಚಿವರು ಎದ್ದು ನಿಲ್ಲುತ್ತಿಲ್ಲ. ಸಿದ್ದರಾಮಯ್ಯ ಅವರು ಈ ಹಗರಣಗಳಲ್ಲಿ ಸಿಕ್ಕಿ ಹಾಕಿಕೊಂಡರೆ ಎಂದು ಭಯದಿಂದ ಎಲ್ಲರೂ ಅವರನ್ನು ಬಿಟ್ಟು ದೂರ ಸರಿಯುತ್ತಿದ್ದಾರೆ. ಬಿಜೆಪಿ ಕಾಲದ 21 ಹಗರಣಗಳನ್ನು ತನಿಖೆ ಮಾಡುತ್ತಾರಂತೆ. ನೀವು ಒಂದು ವರ್ಷ ಮೂರು ತಿಂಗಳು ಕಡುಬು ತಿನ್ನುತ್ತಿದ್ರಾ ಇಷ್ಟು ದಿನ ಯಾಕೆ ಬಾಯಿ ಮುಚ್ಚಿಕೊಂಡಿದ್ರಿ? ದ್ವೇಷ ಮನೋಭಾವನೆಯಿಂದ ಸುಳ್ಳು ಆರೋಪ ಮಾಡೋದು ಸರಿಯಲ್ಲ ಎಂದು ಹೇಳಿದರು.
ವಾಲ್ಮೀಕಿ ನಿಗಮದ ಕೋಟ್ಯಾಂತರ ರೂ. ಹಗರಣದಲ್ಲಿ ಸಿಲುಕಿದ್ದರಿಂದ ಸಿಎಂ ಸಿದ್ದರಾಮಯ್ಯ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಅಧಿಕಾರಿಗಳು ಹಗರಣ ಮಾಡಿದ್ದಾರೆ ಎನ್ನುತ್ತೀರಿ, ನೀವು ಅಸಹಾಯಕರಾ? ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಅವರ ವ್ಯಕ್ತಿತ್ವಕ್ಕೆ ಮೆರುಗು ಬರುತ್ತದೆ. ದೇಶಕ್ಕೆ ಬಂದು 75 ವರ್ಷ ಆಗಿದೆ. 60 ವರ್ಷ ಅನೇಕ ಇಡಿ, ಐಟಿ ದಾಳಿ ಆಗಿದೆ. ಹಾಗಾದರೆ ಅವನ್ನೆಲ್ಲಾ ನೀವೆ ಮಾಡಿಸಿದ್ದು ಎಂದು ಹೇಳಿದ್ದೇವಾ? ಕಾಂಗ್ರೆಸ್ನವರ ಆರೋಪವನ್ನು ಜನ ನಂಬಲ್ಲ ಎಂದರು.