ಚೆನ್ನೈ, ಮೇ 17(Daijiworld News/MSP): ಖ್ಯಾತ ನಟ, ಮಕ್ಕಳ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲಹಾಸನ್ ಅವರನ್ನು ಗುರಿಯಾಗಿರಿಸಿಕೊಂಡು ಗುರುವಾರ ಮತ್ತೆ ಕಲ್ಲು ಮತ್ತು ಮೊಟ್ಟೆಗಳನ್ನು ತೂರಲಾಗಿದೆ. ಬುಧವಾರ ಅವರನ್ನು ಗುರಿಯಾಗಿಸಿ ಚಪ್ಪಲಿ ಎಸೆಯಲಾಗಿತ್ತು.
ಗುರುವಾರ ರಾತ್ರಿ ಅರವಾಕುರಿಚಿಯಲ್ಲಿ ಉಪಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭ ಇಬ್ಬರು ಕಿಡಿಗೇಡಿಗಳು ಕಲ್ಲು ಮತ್ತು ಮೊಟ್ಟೆಗಳನ್ನು ಅವರನ್ನು ಗುರಿಯಾಗಿಸಿ ಎಸೆದಿದ್ದಾರೆ. ಆದರೆ ಕಲ್ಲು ಮತ್ತು ಮೊಟ್ಟೆಗಳು ಯಾರೊಬ್ಬರಿಗೂ ತಗುಲಿರಿಲಿಲ್ಲ. ದಾಳಿಯ ಬಳಿಕ ಕಮಲಹಾಸನ್ ಅವರಿಗೆ ಭದ್ರತಾ ಸಿಬಂದಿ ರಕ್ಷಣೆ ನೀಡಿದರು.
ತಮ್ಮ ಮೇಲಿನ ದಾಳಿಗಳ ಕುರಿತು ಪ್ರತಿಕ್ರಿಯೆ ನೀಡಿರುವ ಕಮಲ ಹಾಸನ್, ನಾನು ಬಂಧನವಾದರೂ ಭಯವಿಲ್ಲ, ನಾನು ನನ್ನ ಹೇಳಿಕೆಯಿಂದ ಹಿಂದೆ ಸರಿಯುವುದಿಲ್ಲ. ಪ್ರತಿಯೊಂದು ಧರ್ಮವೂ ತನ್ನದೇ ಆದ ಭಯೋತ್ಪಾದಕರನ್ನು ಹೊಂದಿದೆ . ಉಗ್ರರಿಗೆ ಯಾವುದೇ ಧರ್ಮವಿಲ್ಲ. ಪ್ರತೀ ಧರ್ಮದಲ್ಲೂ ತನ್ನದೇ ಆದ ಉಗ್ರತ್ವ ಹೊಂದಿರುವುದನ್ನು ಇತಿಹಾಸದಲ್ಲಿದೆ. ಒಂದು ವೇಳೆ ನನ್ನನ್ನು ಬಂಧಿಸುವುದಾದರೇ ಬಂಧಿಸಲಿ ನನಗೆ ಬಂಧನದ ಭಯವಿಲ. ಆದರೆ ನನ್ನ ಬಂಧಿಸುವುದರಿಂದ ಮತ್ತಷ್ಟು ಸಮಸ್ಯೆಗಳು ಉದ್ಭವವಾಗಲಿದೆ. ಇದು ಎಚ್ಚರಿಕೆಯಲ್ಲ ಕೇವಲ ಸಲಹೆ ಮಾತ್ರ ಎಂದು ಹೇಳಿದರು.
ಕೆಲದಿನಗಳ ಹಿಂದೆ ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆಯನ್ನು ಹಿಂದೂ ಧರ್ಮದ ಮೊದಲ ಭಯೋತ್ಪಾದಕ ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದರು.