ನವದೆಹಲಿ, ಮೇ 17(Daijiworld News/MSP): ಅಮೆಜಾನ್ ಡಾಟ್ ಕಾಮ್ ವಿರುದ್ಧ ದೇಶದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು ನೆಟ್ಟಿಗರು ಅಮೆಜಾನ್ ನನ್ನು ಬಹಿಷ್ಕರಿಸಿಲು ಕರೆ ನೀಡಿದ್ದು, ಮೊಬೈಲ್ಗಳಿಂದ ಅಮೆಜಾನ್ ಆ್ಯಪ್ ಅನ್ಇನ್ಸ್ಟಾಲ್ ಮಾಡುತ್ತಿರುವ ಸ್ಕ್ರೀನ್ಶಾಟ್ಗಳನ್ನು ಹರಿಯಬಿಟ್ಟು ಸಿಟ್ಟು ವ್ಯಕ್ತಪಡಿಸಿದ್ದಾರೆ.
ಆನ್ಲೈನ್ ಮಾರಾಟ ತಾಣ ಅಮೆಜಾನ್ನ ಅಮೆರಿಕದ ವೆಬ್ಸೈಟ್ನಲ್ಲಿ ಟಾಯ್ಲೆಟ್ ಸೀಟ್ ಕವರ್, ಡೋರ್ಮ್ಯಾಟ್ಗಳ ಮೇಲೆ ಶಿವ, ಗಣಪತಿ ಸೇರಿದಂತೆ ಹಲವು ಹಿಂದೂ ದೇವತೆಗಳ ಚಿತ್ರವಿರುವ ಉತ್ಪನ್ನಗಳು ಹಿನ್ನೆಲೆಯಲ್ಲಿ ದೇಶದಾದ್ಯಂತ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
#BoycottAmazon ಹ್ಯಾಷ್ಟ್ಯಾಗ್ನಡಿ ಟ್ವಿಟರ್ ನಲ್ಲಿ ಗುರುವಾರ ಹಾಗೂ ಶುಕ್ರವಾರ ಟಾಪ್ ಟ್ರೆಂಡಿಂಗ್ ಆಗಿದೆ ಮಾತ್ರವಲ್ಲದೆ ವಿದೇಶಾಂಗ ವ್ಯವಹಾರ ಸಚಿವ ಸುಷ್ಮಾ ಸ್ವರಾಜ್ ತಮ್ಮ ಟ್ವೀಟ್ ಗಳನ್ನು ಟ್ಯಾಗ್ ಮಾಡುತ್ತಿದ್ದಾರೆ. ಅಮೆಜಾನ್ ಆನ್ಲೈನ್ ಮಾರಾಟ ತಾಣ ಬಹಿಷ್ಕರಿಸಬೇಕು ಎಂಬ ಧ್ವನಿಗೆ ಸಾವಿರಾರು ಸಂಖ್ಯೆಯಲ್ಲಿ ಟ್ವಿಟ್ಟರ್ ಬಳಕೆದಾರರು ದ್ವನಿಗೂಡಿಸಿದ್ದು , ಇದರ ಬೆನ್ನಲ್ಲೇ ಈ ಉತ್ಪನ್ನಗಳನ್ನು ಅಮೆಜಾನ್ ತೆಗೆದುಹಾಕಿದೆ.
ಟಾಯ್ಲೆಟ್ ಸೀಟ್ ಕವರ್, ಯೋಗಾ ಮ್ಯಾಟ್, ಸ್ನೀಕರ್ (ಶೂ), ರಗ್ ಮತ್ತಿತರ ವಸ್ತುಗಳ ಮೇಲೆ ಹಿಂದೂ ದೇವತೆಗಳು ಹಾಗೂ ಧಾರ್ಮಿಕ ಸಂಕೇತಗಳನ್ನು ಅಮೆಜಾನ್ ನ ಅಮೆರಿಕ ವೆಬ್ ಸೈಟ್ ನಲ್ಲಿ ಬಳಸಿರುವುದನ್ನು ರಾಯಿಟರ್ಸ್ ಕಂಡುಹಿಡಿದಿತ್ತು.