ಬಾಗಲಕೋಟೆ, ಜು.22(DaijiworldNews/AA): ರಾಜ್ಯದಲ್ಲಿ ಕಾಂಗ್ರೆಸ್ ಬಿಜೆಪಿ ಹೊಂದಾಣಿಕೆ ರಾಜಕಾರಣ ನಡೆಸುತ್ತಿದ್ದಾರೆ. ಒಬ್ಬರನ್ನೊಬ್ಬರು ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಲೂಟಿ ಹೊಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿಕಾರಿಪುರದಲ್ಲಿ ಈಗಿನ ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಚುನಾವಣೆಯಲ್ಲಿ ಗೆಲ್ಲಲು ಸಿದ್ದರಾಮಯ್ಯ ಅವರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಬಸನಗೌಡ ಯತ್ನಾಳ, ಪ್ರತಾಪ್ ಸಿಂಹ, ಸಿ.ಟಿ. ರವಿ ಅವರ ಮಾತು ನಿಜ. ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ಇರುವುದರಿಂದ ರಾಜಕೀಯ ಭ್ರಷ್ಟಾಚಾರ ನಡೆಯುತ್ತಿರುವುದು ರಾಜ್ಯದ ಜನರಿಗೆ ಅರಿವಾಗಿದೆ. ಈ ಹೊಂದಾಣಿಕೆ ಕೂಡಾ ಹೊರಗಡೆ ಬರುತ್ತದೆ ಎಂದರು.
ಸಿಎಂ ಸಿದ್ದರಾಮಯ್ಯ ಅವರ ಮೇಲೆ ನೇರವಾಗಿ ಮೂಡಾ ಹಗರಣ ಬಂದಿದೆ. ಈ ಆಪಾದನೆ ಸಿದ್ದರಾಮಯ್ಯ ಅವರ ಮೇಲೆ ಬಂದ ಮೇಲೆ ಅವರು ಪ್ರತಿಯಾಗಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 22 ಹಗರಣಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. ರೈತನ ತೆರಿಗೆ ಹಣ ಸಂಪೂರ್ಣ ದುರುಪಯೋಗ ಆಗುತ್ತಿದೆ ಎನ್ನುವುದು ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಅನುಮಾನವಾಗಿದೆ ಎಂದು ಹೇಳಿದರು.
ಬಿಜೆಪಿಯ ಆಡಳಿತಾವಧಿಯಲ್ಲಿ ಹಗರಣಗಳು ನಡೆದಿದೆ. ಅವುಗಳನ್ನು ಸಿಬಿಐಗೆ ನೀಡಬೇಕು ಎಂದು ಸಿದ್ದರಾಮಯ್ಯ ಅವರು ಆವಾಗ ಹೇಳುತ್ತಿದ್ದರು. ಈಗ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಅಪಾದಿಸುತ್ತಿದ್ದಾರೆ. ಭಯ ಪಕ್ಷಗಳ ನಾಯಕರು ಕೇವಲ ತನಿಖೆಯಾಗಲಿ ಎಂದು ಹೇಳುತ್ತಿದ್ದಾರೆ ವಿನಃ ಸಿಬಿಐಗೆ ನೀಡಲು ಯಾಕೆ ಹಿಂಜರಿಯುತ್ತಿದ್ದಾರೆ ಎಂದು ಪ್ರಶ್ನಿಸಿದರು.
ದೇಶದಲ್ಲಿ ಎರಡು ಸರ್ಕಾರದ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರದ ತನಿಖೆಯನ್ನು ಸಿಬಿಐಗೆ ನೀಡಿದರೆ ರಾಜ್ಯ ಮತ್ತು ದೇಶದಲ್ಲಿ ಯಾರು ಭ್ರಷ್ಟಾಚಾರ ಹಗರಣಗಳು ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿ ಜನರ ಮುಂದೆ ಬರುತ್ತದೆ. ಇಲ್ಲವಾದಲ್ಲಿ ಕೇವಲ ಪರಸ್ಪರ ಆರೋಪ ಆಪಾದನೆಗಳನ್ನು ಮಾಡಿದರೆ. ತಪ್ಪಿಸ್ತಸ್ಥರು ಯಾರು ಎಂಬುದು ಹೊರಗೆ ಬರುವುದಿಲ್ಲ. ಕೇವಲ ಟೀಕೆಗಳನ್ನು ಮಾಡುತ್ತಿದ್ದಾರೆ. ಸಿಬಿಐಗೆ ನೀಡಲು ಯಾರು ಸಿದ್ದವಿಲ್ಲ ಎಂದು ತಿಳಿಸಿದರು.