ನವದೆಹಲಿ,ಮೇ 17(Daijiworld News/MSP): ನಾಥೂರಾಮ್ ಗೋಡ್ಸೆ ಪರವಾಗಿ ಹೇಳಿಕೆಗಳನ್ನು ನೀಡಿದ್ದ ಸ್ವಪಕ್ಷೀಯರಿಂದ ಬಿಜೆಪಿ ತೀವ್ರ ಮುಜುಗರ ಅನುಭವಿಸಿದ್ದು, ಇದೀಗ ಹೇಳಿಕೆ ನೀಡಿದ ಸಚಿವ ಅನಂತ್ಕುಮಾರ್ ಹೆಗಡೆ, ಸಂಸದ ನಳಿನ್ ಕುಮಾರ್ ಕಟೀಲ್, ಅಭ್ಯರ್ಥಿ ಸಾದ್ವಿ ಪ್ರಗ್ಯಾ ಠಾಕೂರ್ ವಿರುದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗರಂ ಆಗಿದ್ದು ಶಿಸ್ತು ಕ್ರಮಕ್ಕೆ ಸೂಚಿಸಿದ್ದಾರೆ.
ಬಿಜೆಪಿ ಲೋಕಸಭಾ ಕ್ಷೇತ್ರದ ಭೋಪಾಲ್ ಅಭ್ಯರ್ಥಿ ಸನ್ಯಾಸಿನಿ ಸಾಧ್ವಿ ಪ್ರಗ್ಯಾ ಸಿಂಗ್ ಗೋಡ್ಸೆ ಪರ ಮಾತನಾಡಿ ಗೋಡ್ಸೆ ದೊಡ್ಡ ದೇಶ ಪ್ರೇಮಿ ಎಂದು ಹೇಳಿಕೆ ನೀಡಿ ಬಳಿಕ ಬಿಜೆಪಿ ನಾಯಕರ ಛೀಮಾರಿಗೆ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದರು.
ಇದಾದ ಬೆನ್ನಲ್ಲೇ ದ.ಕ ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್, ಗೋಡ್ಸೆ ಕೊಂದವರ ಸಂಖ್ಯೆ 1, ಅಜ್ಮಲ್ ಕಸಬ್ ಕೊಂದವರ ಸಂಖ್ಯೆ 72, ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17,000 ಹೀಗಾಗಿ ಇವರಲ್ಲಿ ಅತೀ ಕ್ರೂರ ಕೊಲೆಗಾರ ಯಾರು? . ಎಂದು ಪ್ರಶ್ನೆ ಮಾಡಿ ರಾಜೀವ್ ಗಾಂಧಿಯನ್ನು ಗೋಡ್ಸೆ ಕಸಬ್ ಗೆ ಹೋಲಿಕೆ ಮಾಡಿದ್ದರು. ಆ ಬಳಿಕ ಟ್ವೀಟ್ ವಿವಾದದ ರೂಪ ಪಡೆಯುತ್ತಿದ್ದಂತೆ ನನ್ನ ಟ್ವೀಟ್ ನಿಂದ ಯಾರಿಗಾದರೂ ಬೇಸರವಾಗಿದ್ದಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಯಾರನ್ನೂ ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನೋವಾಗಿದೆಯೆಂದು ತಿಳಿದ ತಕ್ಷಣ ಟ್ವೀಟ್ ಹಿಂಪಡೆದಿದ್ದೇನೆ. ಚರ್ಚೆ ಇಲ್ಲಿಗೆ ಮುಗಿಸೋಣ" ಎಂದು ಬರೆದುಕೊಂಡಿದ್ದರು
ಸಚಿವ ಅನಂತ್ ಕುಮಾರ್ ಹೆಗ್ಡೆ ಅವರೂ ಕೂಡ 'ಗೋಡ್ಸೆ ಬಗ್ಗೆ ಚರ್ಚೆ ನಡೆಸುತ್ತಿರುವುದು ಸಂತೋಷ ತಂದಿದೆ. ನಾಥುರಾಮ್ ಗೋಡ್ಸೆ ಈ ಚರ್ಚೆಯನ್ನು ನೋಡಿ ಸಂತೋಷ ಪಡಬಹುದು ಎಂದು ಟ್ವೀಟ್ ಮಾಡಿದ್ದರು. ಆವರ ಈ ಟ್ವೀಟ್ ವಿವಾದಕ್ಕೆ ಗ್ರಾಸವಾದ ಬೆನ್ನಲ್ಲೇ ಅದನ್ನು ಡಿಲೀಟ್ ಮಾಡಿ, ಟ್ವಿಟರ್ ಖಾತೆ ಹ್ಯಾಕ್ ಆಗಿದೆ ಎಂದು ಸ್ಪಷ್ಟನೆ ನೀಡಿದ್ದರು.
ಈ ಎಲ್ಲಾ ಬೆಳವಣಿಗೆಗಳ ಬಳಿಕ ಬಗ್ಗೆ ಟ್ಟಿಟ್ಟರ್ ಮೂಲಕ ಪ್ರತಿಕ್ರಿಯಿಸಿರುವ ಅಮಿತ್ ಶಾ, ನಳಿನ್ ಕುಮಾರ್ ಕಟೀಲ್, ಪ್ರಗ್ಯಾ ಠಾಕೂರ್, ಅನಂತ್ಕುಮಾರ್ ಅವರ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯಗಳಾಗಿದ್ದು, ಹೇಳಿಕೆಗೂ ಬಿಜೆಪಿ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದು ಮಾತ್ರವಲ್ಲದೆ ಅವರಿಂದ ವಿವರಣೆ ಕೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.