ಬೆಂಗಳೂರು, ಜು 22 (DaijiworldNews/ AK): ಲೋಕಸಭಾ ಚುನಾವಣೆಯಲ್ಲಿ ಜನರು ತಮ್ಮ ನಿರೀಕ್ಷೆಯಂತೆ ಮತ ಕೊಡಲಿಲ್ಲ ಎಂಬ ಕಾರಣಕ್ಕೋ ಏನೋ ಗೊತ್ತಿಲ್ಲ. ಸಿದ್ದರಾಮಯ್ಯನವರು ಬೆಲೆ ಏರಿಕೆಯ ಬರೆಯನ್ನು ಕರ್ನಾಟಕ ರಾಜ್ಯದ ಜನರ ಮೇಲೆ ಹೇರಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆಕ್ಷೇಪಿಸಿದರು.
ವಿಧಾನಪರಿಷತ್ತಿನಲ್ಲಿ ಇಂದು ಮಾತನಾಡಿದ ಅವರು, 5 ಕಡೆ ಗ್ಯಾರಂಟಿಗಳ ಮೂಲಕ ಕೊಟ್ಟು ಬೆಲೆ ಏರಿಕೆ ಮೂಲಕ 50 ಕಡೆ ಕಿತ್ತುಕೊಳ್ಳುವ ಕೆಲಸ ಮಾಡಿದ್ದಾರೆ. ಈ ಸರಕಾರ ಬಂದ ಬಳಿಕ ಹಾಲಿನ ದರ ಮಾತ್ರವಲ್ಲದೆ ಆಲ್ಕೋಹಾಲ್ ದರ ಏರಿಸಿದೆ. ಸ್ಟ್ಯಾಂಪ್ ಪೇಪರ್ ದರವನ್ನು ಶೇ 500ರಷ್ಟು ಹೆಚ್ಚಿಸಿದೆ. ಪಹಣಿ, ಜನನ ಪ್ರಮಾಣಪತ್ರ, ಮರಣ ಪ್ರಮಾಣಪತ್ರ ದರ ಡಬಲ್ ಆಗಿದೆ ಎಂದು ಗಮನಕ್ಕೆ ತಂದರು.
ವಿದ್ಯುತ್ ದರ ಉಚಿತ ಎಂದರು.
ಒಂದು ಯೂನಿಟ್ಗೆ 4.75 ರೂ ಇದ್ದುದನ್ನು 7.25 ರೂಗೆ ಏರಿಸಿದ್ದಾರೆ. ಪೆಟ್ರೋಲ್ – ಡೀಸೆಲ್ ಸೆಸ್ ಅನ್ನು 2 ಬಾರಿ ಹೆಚ್ಚಿಸಿದರು. ಇಡೀ ದೇಶದಲ್ಲಿ ಪೆಟ್ರೋಲ್ – ಡೀಸೆಲ್ಗೆ ಅತಿ ಹೆಚ್ಚು ಸೆಸ್ ವಿಧಿಸಿದ 3ನೇ ರಾಜ್ಯ ಕರ್ನಾಟಕ ಎಂದು ತಿಳಿಸಿದರು.
ಆಸ್ತಿ ಖರೀದಿಗೆ ಸಂಬಂಧಿಸಿದ ಸ್ಟ್ಯಾಂಪ್ ಡ್ಯೂಟಿಯನ್ನು ಶೇ 20ರಿಂದ ಶೇ 120ರವರೆಗೆ ಹೆಚ್ಚಿಸಿದ್ದಾರೆ. ಜಿಪಿಎ ಡ್ಯೂಟಿ ತೀವ್ರವಾಗಿ ಹೆಚ್ಚಿಸಿದ್ದಾರೆ. ಆಸ್ತಿ ವಿಭಜನೆ ದಾಖಲೆಪತ್ರ ಮಾಡಲು ಮುಂಚೆ 500 ರೂ. ಸಾಕಿತ್ತು. ಈಗ 3 ಸಾವಿರ ರೂ. ಕೊಡಬೇಕಿದೆ ಎಂದು ಗಮನಕ್ಕೆ ತಂದರು.
ಹೆಣದ ಮೇಲೂ ತೆರಿಗೆ ಹಾಕಿ..
ಬಸ್ ಪ್ರಯಾಣದರ ಏರಿಕೆ ಪ್ರಸ್ತಾಪವೂ ಇದೆ. ಬದುಕಿದ್ದವರ ಮೇಲೆಲ್ಲ ತೆರಿಗೆ ಹಾಕಿದ್ದೀರಿ. ಸತ್ತ ಹೆಣದ ಮೇಲೂ ತೆರಿಗೆ ಹಾಕಿ ಎಂದು ವ್ಯಂಗ್ಯವಾಗಿ ನುಡಿದರು.ಈ ರೀತಿ ತೆರಿಗೆ ಹೆಚ್ಚಿಸಿ, ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಿದ್ದಾರೆ ಎಂದು ಸಿ.ಟಿ. ರವಿ ಅವರು ಟೀಕಿಸಿದರು.ಈ ಸರಕಾರವು ಆಡಳಿತಕ್ಕೆ ಬಂದ ಬಳಿಕ ಬೆಲೆ ಏರಿಕೆ ಮತ್ತು ಭ್ರಷ್ಟಾಚಾರ ಹೊರತುಪಡಿಸಿ ಇನ್ಯಾವುದನ್ನೂ ಮಾಡಿಲ್ಲ ಎಂದು ತಿಳಿಸಿದರು.