ನವದೆಹಲಿ, ಜು 23 (DaijiworldNews/MS): ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರುಇಂದು ಲೋಕಸಭೆಯಲ್ಲಿ ಬೆಳಗ್ಗೆ 11 ಗಂಟೆಗೆ ಮಂಡನೆ ಮಾಡಲಿದ್ದಾರೆ. ಕಳೆದ ಫೆಬ್ರವರಿಯಲ್ಲಿ ನಡೆದ ಮಧ್ಯಂತರ ಬಜೆಟ್ ನ್ನೂ ಸೇರಿ ನಿರ್ಮಲಾ ಸೀತಾರಾಮನ್ ಅವರು ಸತತ ಏಳನೇ ಬಾರಿಗೆ ಮಂಡಿಸುತ್ತಿರುವ ಬಜೆಟ್ ಇದಾಗಿದೆ.
ಜನಸಾಮಾನ್ಯರಿಗೆ ಬಜೆಟ್ ಬಗ್ಗೆ ಇರುವ ನಿರೀಕ್ಷೆಗಳು ಬೆಟ್ಟದಷ್ಟಿದೆ. ಎಲ್ಲಾ ವಿಭಾಗಗಳಲ್ಲಿ ತೆರಿಗೆದಾರರಿಗೆ ಲಾಭದಾಯಕವಾಗುವಂತೆ ಆದಾಯ ತೆರಿಗೆ ರಚನೆಯಲ್ಲಿನ ಬದಲಾವಣೆಗಳ ಮೇಲೆ ಮತ್ತು ಭಾರತದಲ್ಲಿ ಸುಲಭವಾಗಿ ವ್ಯಾಪಾರ ಮಾಡುವುದನ್ನು ಸುಧಾರಿಸುವ ಕುರಿತು ಬಜೆಟ್ ನಲ್ಲಿ ಮಂಡನೆ ಸಾಧ್ಯತೆಯಿದೆ.
ಹೊಸ ತೆರಿಗೆದಾರರು ಈಗಾಗಲೇ ಹೊಸ ತೆರಿಗೆ ಪದ್ಧತಿಯಲ್ಲಿರುವುದರಿಂದ ಸರ್ಕಾರವು ಏಕ ಹೈಬ್ರಿಡ್ ತೆರಿಗೆ ಪದ್ಧತಿಯತ್ತ ಸಾಗಬಹುದು. ಹೊಸ ಆಡಳಿತದಲ್ಲಿ ವಿನಾಯಿತಿ ಸ್ಲ್ಯಾಬ್ ಅನ್ನು ಪ್ರಸ್ತುತ ₹ 3 ಲಕ್ಷದಿಂದ ಕನಿಷ್ಠ ₹ 4 ಲಕ್ಷಕ್ಕೆ ವಿಸ್ತರಿಸುವ ನಿರೀಕ್ಷೆಯಿದೆ.
ನಿರ್ಮಲಾ ಸೀತಾರಾಮನ್ ಅವರ ಸತತ ಏಳನೇ ಕೇಂದ್ರ ಬಜೆಟ್ ಮಂಡನೆ ಇದು ಆಗಿರುವುದರಿಂದ, ಈ ಹಿಂದೆ ಸತತ ಆರು ಬಾರಿ ಬಜೆಟ್ ಮಂಡಿಸಿದ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಮೀರಿಸುತ್ತಾರೆ.