ನವದೆಹಲಿ,ಮೇ 17(Daijiworld News/MSP): ಗೋಡ್ಸೆಯನ್ನು ದೇಶಭಕ್ತ ಎಂದು ಹೇಳಿಕೆ ನೀಡಿದ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರ ವಿರುದ್ದ ಪ್ರಧಾನಿ ನರೇಂದ್ರ ಮೋದಿ ಗರಂ ಆಗಿದ್ದು, ರಾಷ್ಟ್ರಪಿತರನ್ನು ಅವಮಾನಿಸಿದ ಪ್ರಗ್ಯಾ ಸಿಂಗ್ ರನ್ನು ಯಾವ ಕಾರಣಕ್ಕೂ ಕ್ಷಮಿಸಲ್ಲ ಎಂದು ಗುಡುಗಿದ್ದಾರೆ.
ಮಧ್ಯ ಪ್ರದೇಶದ ಖಾರ್ಗೋನ್ ನಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ , ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರಿಗೆ ಮಾಡಿದ ಅವಮಾನ ಸಹಿಸಲು ಸಾಧ್ಯವಾಗುತ್ತಿಲ್ಲ. ತಮ್ಮ ಹೇಳಿಕೆ ಬಗ್ಗೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಕ್ಷಮೆ ಯಾಚಿಸಿರಬಹುದು ಆದರೆ, ನನ್ನಿಂದ ಮಾತ್ರ ಅವರು ಮಾಡಿದ ಅವಮಾನವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಅವರ ಈ ಹೇಳಿಕೆ ಅಕ್ಷಮ್ಯ ಅಪರಾಧ. ಅವರನ್ನು ಕ್ಷಮಿಸುವ ಮಾತೇ ಇಲ್ಲ ಎಂದು ಪ್ರಗ್ಯಾ ಸಿಂಗ್ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶದ ಅಗರ್ ಮಾಲವಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದ ಪ್ರಗ್ಯಾ ಸಿಂಗ್ , 1948ರಲ್ಲಿ ಮಹಾತ್ಮ ಗಾಂಧಿ ಅವರನ್ನು ಹತ್ಯೆಗೈದಿದ್ದ ನಾಥುರಾಮ್ ಗೋಡ್ಸೆ ಒಬ್ಬ ದೇಶಭಕ್ತ ಎಂದು ಪ್ರಗ್ಯಾ ಸಿಂಗ್ ಹೇಳಿಕೆ ನೀಡಿದ್ದರು. " ನಾಥುರಾಂ ಗೋಡ್ಸೆ ಒಬ್ಬ ದೇಶಭಕ್ತರಾಗಿದ್ದವರು, ಮುಂದೆಯೂ ಅವರು ದೇಶಭಕ್ತರೇ. ಅವರನ್ನು ಭಯೋತ್ಪಾದಕ ಎಂದು ಕರೆಯುವವರು ಆತ್ಮವಿಮರ್ಶೆ ಮಾಡಿಕೊಳ್ಳಲಿ" ಎಂದು ನಟ ಕಮಲ ಹಾಸನ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದರು.