ಬೆಂಗಳೂರು, ಜು.23(DaijiworldNews/AA): ಅಸಹಜ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದ್ದು, ಇಂದು ಮಧ್ಯಾಹ್ನ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆಗಿದ್ದಾರೆ.
ಒಂದು ತಿಂಗಳ ಜೈಲು ವಾಸದ ಬಳಿಕ ಜೈಲಿನಿಂದ ಹೊರ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಟುಂಬದ ವಿರುದ್ಧ ಷಡ್ಯಂತ್ರ ಮಾಡಿ ತೇಜೋವಧೆ ಮಾಡಿದ್ದಾರೆ. ತೇಜೋವಧೆ ಮಾಡುವ ದುರುದ್ದೇಶದಿಂದ ಕೇಸ್ ದಾಖಲಿಸಿದ್ದಾರೆ. ನಾವು ಯಾವುದಕ್ಕೂ ಹೆದರಿಕೊಂಡು ಎಲ್ಲಿಗೂ ಓಡಿಹೋಗಲ್ಲ 2-3 ದಿನದಲ್ಲಿ ಎಲ್ಲದಕ್ಕೂ ಸ್ಪಷ್ಟನೆ ಕೊಡ್ತೇನೆ ಎಂದರು.
ತನಿಖಾಧಿಕಾರಿಗಳಿಗೆ ಸಹಕಾರ ನೀಡಿದ್ದೇನೆ. ಕಾನೂನು ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವಿದೆ. ಇದು ಕೇಸ್ ಅಲ್ಲ, ಷಡ್ಯಂತ್ರ ಕುತಂತ್ರ. ಶಿವಕುಮಾರ್ ಆಪ್ತ ಸಹಾಯಕನಲ್ಲ, ಕಾರು ಚಾಲಕನೂ ಅಲ್ಲ. ನಮಗೆ ಲೋಕೇಶ್ ಅಂತಾ ಒಬ್ಬನೇ ಕಾರು ಚಾಲಕ. ಹಾಸನದಲ್ಲಿ ರೇವಣ್ಣರಿಗಾಗಲಿ ನಮಗಾಗಲಿ ಕಪ್ಪುಚುಕ್ಕೆ ಇಲ್ಲ. ರಾಜಕೀಯವಾಗಿ ನಮ್ಮನ್ನು ಕುಗ್ಗಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳಿದರು.
ಕಾನೂನು ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವಿದೆ. ಇದರಿಂದ ಪರಿಪೂರ್ಣವಾಗಿ ಹೊರಬರುತ್ತೇನೆ. ರಾಜಕೀಯವಾಗಿ ಹಾಸನ ಜಿಲ್ಲೆಯಲ್ಲಿ ನಮ್ಮನ್ನು ಕುಗ್ಗಿಸುವ ಷಡ್ಯಂತ್ರ ಅಷ್ಟೇ. ಮೊದಲ ದಿನದಿಂದಲೂ ತನಿಖೆಗೆ ಸಹಕರಿಸಿದ್ದೇನೆ. ನಾನೇನು ಹೆದರಿಕೊಂಡು ಎಲ್ಲಿಯೋ ಓಡಿಹೋಗಲ್ಲ. ನಮ್ಮ ಕುಟುಂಬ ಮತ್ತು ಹಾಸನ ಜಿಲ್ಲೆಯ ರಾಜಕಾರಣವನ್ನ ಕುಸಿತಗೊಳಿಸಬೇಕು ಅಂದುಕೊಂಡಿದ್ದಾರೆ. ಯಾರು ಎಂಬುವ ಬಗ್ಗೆ ಎಲ್ಲದಕ್ಕೂ ಸದ್ಯದಲ್ಲೇ ಉತ್ತರವನ್ನ ಕೊಡ್ತೀನಿ. ನಾನು ಯಾವುದೇ ತಪ್ಪು ಮಾಡಿಲ್ಲ, ನಾನು ಓಡೋಗೋದಿಲ್ಲ. ನನಗೆ ನ್ಯಾಯಾಂಗ ಮತ್ತು ಕಾನೂನಿನ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದರು.
ಹೊಳೆನರಸೀಪುರ ಗ್ರಾಮೀಣ ಠಾಣೆಯಲ್ಲಿ ಸೂರಜ್ ರೇವಣ್ಣ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದ್ದವು. ಪ್ರಕರಣ ದಾಖಲಾದ ಬಳಿಕ ಜೂನ್ 23 ರಂದು ಸೂರಜ್ ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಮೊದಲಿಗೆ ಸೂರಜ್ ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಿತ್ತು. ಬಳಿಕ ಸೋಮವಾರ ಎರಡನೇ ಪ್ರಕರಣದಲ್ಲೂ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.