ದೆಹಲಿ, ಜು 23(DaijiworldNews/ AK):ವಿದ್ಯಾರ್ಥಿಗಳ ಪರೀಕ್ಷೆಯ ವಿಷಯಕ್ಕೆ ಬಂದಾಗ ಅದು ಉನ್ನತ ಶಿಕ್ಷಣ ಅಥವಾ ಉದ್ಯೋಗವೇ ಆಗಿರಲಿ ನಾವು ಯಾವುದೇ ರೀತಿಯ ಉಲ್ಲಂಘನೆಯನ್ನು ನಾವು ಸಹಿಸುವುದಿಲ್ಲ ಎಂದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೀಟ್ ಯುಜಿ ಮರು ಪರೀಕ್ಷೆ ಇಲ್ಲ ಎಂಬ ಸುಪ್ರೀಂಕೋರ್ಟ್ ಆದೇಶವನ್ನು ಸ್ವಾಗತಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದನ್ನು ತಡೆಯುವುದಕ್ಕಾಗಿಯೇ ಮೋದಿ ಸರ್ಕಾರವು ಕಟ್ಟುನಿಟ್ಟಾದ ಕಾನೂನನ್ನು ಜಾರಿಗೆ ತಂದಿದೆ. ಪಬ್ಲಿಕ್ ಎಕ್ಸಾಮಿನೇಷನ್ಸ್ ಕಾಯಿದೆಯನ್ನು ಸುಪ್ರೀಂಕೋರ್ಟ್ ಮುಂದೆ ಪ್ರಸ್ತುತಪಡಿಸುತ್ತಾ, ನಮ್ಮ ಸರ್ಕಾರವು ಪಾರದರ್ಶಕ, ವಂಚನೆ-ಮುಕ್ತ ಮತ್ತು ಶೂನ್ಯ-ದೋಷಗಳ ಪರೀಕ್ಷಾ ವ್ಯವಸ್ಥೆಯನ್ನು ಹೊಂದಲು ಬದ್ಧವಾಗಿದೆ ಎಂದು ಹೇಳಿದ್ದಾರೆ.
ಎನ್ಟಿಎಯ ಸಂಪೂರ್ಣ ಪುನಶ್ಚೇತನಕ್ಕಾಗಿ ಆ ಸಮಿತಿಯು ಸಮರ್ಪಿತವಾಗಿ ಕೆಲಸ ಮಾಡುತ್ತಿದೆ. ಸಮಿತಿಯು ತಜ್ಞರ ಅಭಿಪ್ರಾಯಗಳನ್ನು ಸಂಗ್ರಹಿಸಿ ವಿವಿಧ ಮಾದರಿಗಳನ್ನು ಅಧ್ಯಯನ ಮಾಡಿದೆಎನ್ಟಿಎಯನ್ನು ದೋಷಮುಕ್ತಗೊಳಿಸಲು ನಾವು ಬದ್ಧರಾಗಿದ್ದೇವೆ, ಈ ಅಕ್ರಮಗಳಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ. ಸಿಬಿಐ ತನ್ನ ಕೆಲಸವನ್ನು ಮಾಡುತ್ತಿದೆ ಎಂದರು.
ಸಿಬಿಐ ಒಂದು ಸಮರ್ಥ ಸಂಸ್ಥೆ. ಅದು ತನ್ನ ಕೆಲಸವನ್ನು ಮಾಡಲಿ. ಕೋರ್ಟ್ ಕೂಡ ಸಿಬಿಐ ಬಗ್ಗೆ ಮಾತನಾಡಿದೆ. ನಮಗೆ ಸಿಬಿಐ ಮೇಲೆ ನಂಬಿಕೆ ಇದೆ ಎಂದ ಸಚಿವರು NTA ಎರಡು ದಿನಗಳಲ್ಲಿ NEET-UG ಅಂತಿಮ ಫಲಿತಾಂಶಗಳನ್ನು ಪ್ರಕಟಿಸುತ್ತದೆ ಎಂದಿದ್ದಾರೆ.
ಸತ್ಯಮೇವ ಜಯತೇ, ಸುಪ್ರೀಂಕೋರ್ಟ್ನ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ನಮ್ಮ ವಿದ್ಯಾರ್ಥಿಗಳು ಮತ್ತು ಅವರ ಭವಿಷ್ಯದ ಬಗ್ಗೆ ಸರ್ಕಾರ ಯೋಚಿಸುತ್ತದೆ. ನಾವು ಸುಪ್ರೀಂ ಕೋರ್ಟ್ಗೆ ಕೃತಜ್ಞರಾಗಿದ್ದೇವೆ ಎಂದರು.