ಬೆಂಗಳೂರು, ಜು 25 (DaijiworldNews/ AK): 2018ರಲ್ಲಿ 25 ಲಕ್ಷ, 2023ರಲ್ಲಿ 8 ಕೋಟಿ, 2024ರಲ್ಲಿ ನಿವೇಶನ ವಾಪಸ್ ಕೊಡಬೇಕೆಂದು ಸಾರ್ವಜನಿಕರ ಒತ್ತಡ ಬಂದಾಗ ಮುಖ್ಯಮಂತ್ರಿಗಳು ಪರಿಹಾರ ಕೇಳುವುದು 65 ಕೋಟಿ ರೂ. ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆಕ್ಷೇಪಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2023ರಲ್ಲಿ ಚುನಾವಣಾ ಪ್ರಮಾಣಪತ್ರದಲ್ಲಿ ಈ ಕೃಷಿ ಭೂಮಿಯನ್ನು ಪರಿವರ್ತಿತ (ಕನ್ವರ್ಷನ್ ಆದ) ಭೂಮಿ ಎಂದು ತೋರಿಸಿದ್ದರು. ಅದರ ಬೆಲೆಯನ್ನು 8 ಕೋಟಿ ಎಂದು ತೋರಿಸಿದ್ದರು ಎಂದು ಟೀಕಿಸಿದರು. ರಾಹುಲ್ ಗಾಂಧಿಯವರು ತಮ್ಮ ಭಾಷಣದಲ್ಲಿ ಯಂತ್ರಕ್ಕೆ ಒಂದೆಡೆಯಿಂದ ಆಲೂಗಡ್ಡೆ ಹಾಕಿ ಇನ್ನೊಂದೆಡೆಯಿಂದ ಚಿನ್ನ ಪಡೆಯುವ ಮಾತನಾಡಿದ್ದರು. ಬಹುಶಃ ಆ ಫಾರ್ಮುಲಾವನ್ನು ಸಿದ್ದರಾಮಯ್ಯನವರು ಸಾಬೀತು ಪಡಿಸಿದ್ದಾರೆ ಎಂದು ನುಡಿದರು.
ವರುಣಾ ಕ್ಷೇತ್ರ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾಗಿದ್ದ ಕಾರಣ, ಮೂಡ ಸದಸ್ಯರಾಗಿದ್ದ ಕಾರಣ ಈ ನಿವೇಶನಗಳ ಮಾಹಿತಿ ಅವರಿಗೆ ಮೊದಲೇ ಇತ್ತು. ಸತ್ಯ ಗೊತ್ತಿದ್ದೂ, ಇವರ ಪ್ರಭಾವದಲ್ಲಿ ಜಮೀನನ್ನು ಡಿನೋಟಿಫೈ ಮಾಡಿದ್ದರು. ಇವರಿಗೆ ಗೊತ್ತಿದ್ದೇ ಸಮಾನಾಂತರ ಬಡಾವಣೆ ಹೊರತುಪಡಿಸಿ ವಿಜಯನಗರ ಬಡಾವಣೆಯಲ್ಲಿ ಇವರ ಪತ್ನಿಗೆ ನಿವೇಶನ ಕೊಡಲಾಗಿತ್ತು. ಇವರ ಪ್ರಭಾವದಲ್ಲೇ ಇದೆಲ್ಲ ನಡೆದಿದೆ ಎಂದು ದೂರಿದರು
2022ರಲ್ಲಿ ಆರ್ಟಿಸಿಯಲ್ಲಿ ಪಾರ್ವತಿಯವರ ಹೆಸರು ನೋಂದಣಿ ಆಗಿತ್ತು. ಹಿಂದೆ ಪ್ರತಿ ಕಾಲಂನಲ್ಲಿ ಮೂಡ ಎಂದಿತ್ತು. ಇಡೀ ಹಗರಣದ ಸೂತ್ರಧಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಂದು ಆರೋಪಿಸಿದರು.
ಪಾತ್ರಧಾರಿಗಳು ಬೇರೆ ಬೇರೆಯವರು ಇದ್ದಾರೆ. ಇದರಲ್ಲಿ ದೇವರಾಜು ಓನರ್ ಅಲ್ಲ. ಮೈಲಾರಯ್ಯ ಓನರ್. ದೇವರಾಜು ಹೆಸರಿಗೆ ಅಕ್ರಮವಾಗಿ ಖಾತೆ ಸೃಷ್ಟಿಸಿ ಡಿ ನೋಟಿಫಿಕೇಶನ್ ಮಾಡಿ ಅದನ್ನು ಇವರ ಕುಟುಂಬದವರ ಹೆಸರಿನಲ್ಲಿ ಖರೀದಿ ಮಾಡಿದ್ದಾರೆ ಎಂದು ವಿವರ ನೀಡಿದರು.ದಲಿತರಿಗೆ ವಂಚನೆ ಮಾಡಿದ್ದಾರೆ. ಖರೀದಿ ಮಾಡಿದ್ದು 5.92 ಲಕ್ಷಕ್ಕೆ. ಇದೊಂದು ನಾಟಕ ಪ್ರಹಸನ. ಮೂಡದ ಹಗರಣದ ಅರಿವು ಸಿದ್ದರಾಮಯ್ಯನವರಿಗೆ ಇದೆ. ಸಿದ್ದರಾಮಯ್ಯನವರ ರಕ್ಷಣೆ ಇದ್ದ ಕಾರಣ ಅಲ್ಲಿನ ಅಧಿಕಾರಿಗಳು, ಪ್ರಭಾವಿಗಳು ಇನ್ನಷ್ಟು ಹಗರಣ ಮಾಡಿದ್ದಾರೆ ಎಂದು ತಿಳಿಸಿದರು.
2013ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಈ ಸರ್ವೇ ನಂಬರ್ 464 ನನ್ನ ಕುಟುಂಬಕ್ಕೆ ಸೇರಿದೆ; ನನ್ನ ಪತ್ನಿಯವರ ಹೆಸರಿನಲ್ಲಿದೆ ಎಂದು ಚುನಾವಣಾ ಅಫಿಡವಿಟ್ನಲ್ಲಿ ಘೋಷಿಸಿರಲಿಲ್ಲ. ಉದ್ದೇಶಪೂರ್ವಕವಾಗಿ ಸತ್ಯವನ್ನು ಮರೆಮಾಚಿದಂತಿದೆ. ಇದು ಜನಪ್ರತಿನಿಧಿ 125 ಎ ಕಾಯ್ದೆ ಪ್ರಕಾರ 6 ತಿಂಗಳು ಶಿಕ್ಷೆಗೆ ಒಳಪಡುವಂಥ ಗಂಭೀರ ಅಪರಾಧ ಎಂದು ವಿವರಿಸಿದರು.
ಕಾನೂನು ಪದವೀಧರ, ಅತ್ಯಂತ ಹಿರಿಯ ರಾಜಕಾರಣಿ, ಈಗ ಸಿಎಂ ಆಗಿರುವ ಸಿದ್ದರಾಮಯ್ಯ ಅವರು ಅಫಿಡವಿಟ್ನಲ್ಲಿ ಇದನ್ನು ದಾಖಲಿಸದೆ ಮರೆಮಾಚಿದ್ದರು ಎಂದು ಆಕ್ಷೇಪಿಸಿದರು. ಇದು ಕೂಡ ಕಾನೂನುಬಾಹಿರ. 2018ರ ಅಫಿಡವಿಟ್ನಲ್ಲಿ ಇದನ್ನು ದಾಖಲಿಸಿದ್ದರು. ಆದರೆ, ಕೃಷಿ ಭೂಮಿ ಎಂದು ತೋರಿಸಿ ಬೆಲೆಯನ್ನು 25 ಲಕ್ಷ ಎಂದಿದ್ದರು. ಅವರ ಬಾಮೈದ 2005ರಲ್ಲಿ ಅನ್ಯಕ್ರಾಂತ ಮಾಡಿಸಿಕೊಂಡು ಅದನ್ನು ಕೃಷಿ ಭೂಮಿ ಎಂದು ಸುಳ್ಳು ಅಫಿಡವಿಟ್ ಕೊಟ್ಟಿದ್ದರು ಎಂದು ತಿಳಿಸಿದರು.
ಮೂಡ ನೋಟಿಫೈ ಮಾಡಿದ್ದ ಹಾಗೂ ಅನ್ಯಕ್ರಾಂತ ಎಂದು ಮಾಡಿದ್ದ 3.16 ಎಕರೆ ಜಮೀನನ್ನು ಸಿದ್ದರಾಮಯ್ಯನವರ ಬಾಮೈದ ಖರೀದಿಸಿದ್ದು ಮೊದಲ ತಪ್ಪು, ಅಭಿವೃದ್ಧಿ ಹೊಂದಿದ ಜಮೀನನ್ನು ಸ್ಥಳಕ್ಕೆ ಬಾರದೆ, ಸ್ಥಳ ಪರಿಶೀಲನೆ ಮಾಡದೆ ಅನ್ಯಕ್ರಾಂತ ಮಾಡಿದ್ದು ಇನ್ನೊಂದು ತಪ್ಪು ಎಂದು ನುಡಿದರು.
ಕರಾರಿಗೆ ಒಳಪಟ್ಟು ಎಂದು ತಿಳಿಸಿದ್ದರೂ ಖರೀದಿಯ ಬಳಿಕ ಬಾಂಡ್ ಪೇಪರ್ ಖರೀದಿ ಮಾಡಿದ್ದರು ಎಂದು ವಿವರ ನೀಡಿದರು. ಆ ದಾಖಲೆ ತಮ್ಮ ಬಳಿ ಇದೆ ಎಂದರು.
2010ರಲ್ಲಿ ಮಲ್ಲಿಕಾರ್ಜುನಸ್ವಾಮಿಯವರು ಈ ಜಮೀನನ್ನು ತಮ್ಮ ಸಹೋದರಿ ಶ್ರೀಮತಿ ಪಾರ್ವತಮ್ಮ (ಸಿದ್ದರಾಮಯ್ಯನವರ ಧರ್ಮಪತ್ನಿ) ಅವರಿಗೆ ಅರಶಿನ ಕುಂಕುಮಕ್ಕೆ ಎಂದು ಉಡುಗೊರೆ ಕೊಟ್ಟಿದ್ದರು. ಆ ಉಡುಗೊರೆ ಕೊಡುವಾಗ ಕೃಷಿ ಭೂಮಿ ಎಂದು ತಪ್ಪು ಮಾಹಿತಿ ಕೊಟ್ಟಿದ್ದರು. ಅನ್ಯಕ್ರಾಂತ ಮಾಡಿಸಿಕೊಂಡಿದ್ದರೂ ಕೃಷಿ ಭೂಮಿ ಎಂದು ಗಿಫ್ಟ್ ಕೊಟ್ಟಿದ್ದರು ಎಂದರು.