ಬೆಂಗಳೂರು, ಜು.26(DaijiworldNews/AA): 20 ವರ್ಷಗಳಿಂದ ಯಾವುದೇ ಆಕ್ಷೇಪ ಎತ್ತದ ವ್ಯಕ್ತಿಗಳನ್ನು ಎತ್ತಿ ಕಟ್ಟಿ ಹಕ್ಕುದಾರ ಎಂದು ಹೇಳಿ ರಾಜಕೀಯ ನಡೆಸುತ್ತಿರುವ ಬಿಜೆಪಿಯವರದು ಮನೆಮುರುಕ ರಾಜಕೀಯ. ಮುಡಾ ಜಮೀನು ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನ ಸೌಧ ಆವರಣದಲ್ಲಿ ಇಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು, ಈ ಜಮೀನು ಸರ್ಕಾದಿಂದ ಗ್ರ್ಯಾಂಟ್ ಆಗಿದ್ದಲ್ಲ ಹಾಗೂ ಪ್ರಸ್ತುತ ಹಕ್ಕುದಾರಿಕೆ ಇದೆ ಎಂದು ಹೇಳುತ್ತಿರುವ ಮಂಜುನಾಥ್ ಸ್ವಾಮಿ ಅದರ ಹಕ್ಕುದಾರಿಕೆಯನ್ನು ಬಿಟ್ಟುಕೊಟ್ಟಿರುವ ಕುರಿತು ದಾಖಲೆಗಳನ್ನು ಅವರು ಬಿಡುಗಡೆ ಮಾಡಿದರು.
ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಸದನದಲ್ಲಿ ಒಂದು ವಿರೋಧಪಕ್ಷವಾಗಿ ಕೆಲಸ ಮಾಡದೆ ಸರ್ಕಾರದ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಅನುಭವಿಸಿದ ದಯನೀಯ ಸೋಲು ಮತ್ತು ಲೋಕಸಭಾ ಚುನಾವಣೆಯಲ್ಲಿ ಅವೆರಡು ಪಕ್ಷಗಳು ಜೊತೆಗೂಡಿ ಹೋರಾಡಿದರೂ ನಿರೀಕ್ಷಿತ ಮಟ್ಟದಲ್ಲಿ ಸಿಗದ ಯಶಸ್ಸು ಅವರನ್ನು ಹತಾಶೆಯ ಕೂಪಕ್ಕೆ ನೂಕಿದೆ. ಜನರಿಂದ ಕಳೆದಕೊಂಡಿರುವ ವಿಶ್ವಾಸವನ್ನು ವಾಪಸ್ಸು ಪಡೆಯಲು ವಾಮಮಾರ್ಗ ಅನುಸರಿಸುತ್ತಿದ್ದಾರೆ ಎಂದು ಅವರು ಹೇಳಿದರು.
2019 ರ ಲೋಕಸಭಾ ಚುನಾವಣೆಯಲ್ಲಿ ಕೇವಲ 1 ಸೀಟು ಪಡೆದಿದ್ದ ಕಾಂಗ್ರೆಸ್ ಈ ಬಾರಿ 9 ಸ್ಥಾನ ಗಳಿಸಿದೆ ಮತ್ತು ತನ್ನ ವೋಟುಶೇರನ್ನು ಶೇಕಡ 13.5 ರಷ್ಟು ಹೆಚ್ಚಿಸಿಕೊಂಡಿದೆ ಎಂದು ಮುಖ್ಯಮಂತ್ರಿ ಹೇಳಿದರು. ನಗರಾಭಿವೃದ್ಧಿ ಪ್ರಾಧಿಕಾರಗಳ ಬಗ್ಗೆ ಮಾಹಿತಿ ನೀಡಿದ ಸಿದ್ದರಾಮಯ್ಯ, ಮೊದಲಿದ್ದ ಸಿಐಟಿಬಿ ಯನ್ನು 1987ರಲ್ಲಿ ರದ್ದು ಮಾಡಿ ಪ್ರಾಧಿಕಾರಗಳ ರಚನ ಮಾಡಲಾಗಿತ್ತು ಎಂದು ತಿಳಿಸಿದರು.