ಹುಬ್ಬಳ್ಳಿ, ಮೇ17(Daijiworld News/SS): ಗೋಡ್ಸೆಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ರಾಜೀವ್ ಗಾಂಧಿ ವಿರುದ್ಧ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್ ಮತ್ತು ಅನಂತ್ ಕುಮಾರ್ ಹೆಗಡೆ ನೀಡಿರುವ ಹೇಳಿಕೆಗಳು ಪಕ್ಷದ ಗೌರವಕ್ಕೆ ಧಕ್ಕೆ ತಂದಿದೆ. ಈಗಾಗಲೇ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೊಟೀಸ್ ಜಾರಿ ಮಾಡಿದ್ದು, 10 ದಿನಗಳೊಳಗೆ ಉತ್ತರಿಸುವಂತೆ ತಿಳಿಸಲಾಗಿದೆ. ಮಹಾತ್ಮಾ ಗಾಂಧಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು. ಒಬ್ಬರ ಬಗ್ಗೆ ಮಾತನಾಡುವಾಗ ಏನು ಮಾತನಾಡುತ್ತಿದ್ದೇವೆ ಎಂಬ ಅರಿವಿರಬೇಕು. ಇಂತಹ ಬೇಜವಾಬ್ದಾರಿ ಹೇಳಿಕೆಗಳು ಅಗತ್ಯವಿಲ್ಲ ಎಂದು ಹೇಳಿದರು.
ಗಾಂಧಿ ಬಗ್ಗೆ ಹಗುರ ಹೇಳಿಕೆಗಳು ಶೋಭೆ ತರಲ್ಲ, ಇದೊಂದು ಕ್ಷಮಿಸಲಾರದ ಅಪರಾಧ. ಅಮಿತ್ ಷಾ ಅಧಿಕಪ್ರಸಂಗ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದಿದ್ದಾರೆ.
ಟ್ವಿಟ್ಟರ್ನಲ್ಲಿ ಟ್ವೀಟ್ ಮಾಡಿದ್ದ ನಳಿನ್ ಕುಮಾರ್ ಕಟೀಲ್, ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಗೋಡ್ಸೆ ಮತ್ತು ಉಗ್ರ ಕಸಬ್ಗೆ ಹೋಲಿಕೆ ಮಾಡಿದ್ದರು. ಗೋಡ್ಸೆ ಕೊಂದಿದ್ದು ಒಬ್ಬರನ್ನು, ಕಸಬ್ ಕೊಂದಿದ್ದು 72 ಜನರನ್ನು, ರಾಜೀವ್ ಗಾಂಧಿ ಕೊಂದಿದ್ದು 17,000 ಜನರನ್ನು. ಇವರಲ್ಲಿ ಅತೀ ಕ್ರೂರ ಕೊಲೆಗಾರ ಯಾರು...? ಎಂದು ಪ್ರಶ್ನಿಸಿದ್ದರು.