ವಿಜಯಪುರ, ಜು.28(DaijiworldNews/AA): ಭೋವಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಹಾಗೂ ಯಡಿಯೂರಪ್ಪ ಭ್ರಷ್ಟಾಚಾರದ ಬಗ್ಗೆ ಈಗ ಮಾತಾಡ್ತಿದ್ದೀರಿ, ಅಧಿಕಾರಕ್ಕೆ ಬಂದು 14 ತಿಂಗಳಾದರೂ ಕತ್ತೆ ಕಾಯ್ದಿರೇನು ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಭೂಹಗರಣದ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪ ಮಾಡಿದ್ದಾರೆ. ಕಳೆದ 14 ತಿಂಗಳಿಂದ ಇವರೇ ಸರ್ಕಾರ ನಡೆಸುತ್ತಿದ್ದು, ಈವರೆಗೆ ಕತ್ತೆ ಕಾಯುತ್ತಿದ್ದರಾ? ಭ್ರಷ್ಟಾಚಾರ ಮಾಡಿರುವ ಎಲ್ಲರ ತನಿಖೆ ಮಾಡಿ, ಸರ್ಕಾರ ನಿಮ್ಮದೇ ಇದೆ ಎಂದು ಹೇಳಿದರು.
ಇವರ ಒಳ ಒಪ್ಪಂದದಿಂದ ಮೂರು ರಾಜಕೀಯ ಪಕ್ಷಗಳಿಗೆ ಪೆಟ್ಟು ಬಿದ್ದಿದೆ. ಮೂರು ಪಕ್ಷದ ಒಳ ಒಪ್ಪಂದದ ಗಿರಾಕಿಗಳು ಹೊರಗೆ ಬಂದು ಹೊಸ ಪಕ್ಷ ಕಟ್ಟಲಿ. ಹೀಗೆ ಕಟ್ಟಿದ ಪಕ್ಷಕ್ಕೆ ಒಳ ಒಪ್ಪಂದ ಪಾರ್ಟಿ ಎಂದು ಹೆಸರಿಡಲಿ. ಆಗ ಉಳಿದಂತೆ ಬಿಜೆಪಿ, ಕಾಂಗ್ರೆಸ್ ಜೆಡಿಎಸ್ ಶುದ್ಧ ಆಗುತ್ತವೆ ಎಂದು ಕಿಡಿ ಕಾರಿದರು.