ದಾವಣಗೆರೆ, ಜು.28(DaijiworldNews/AK):ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿರುವ ಪಾರ್ಸೆಲ್ ನಾಯಿ ಮಾಂಸ ಅಲ್ಲ, ಮೇಕೆಯ ಮಾಂಸ ಎಂಬುದು ವರದಿಯಲ್ಲಿ ದೃಢವಾಗಿದೆ ಎಂದು ಗೃಹಸಚಿವ ಡಾ.ಜಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಾಯಿ ಮಾಂಸ ಮಾರಾಟ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಲ್ಯಾಬ್ನಲ್ಲಿ ಅದು ಮೇಕೆ ಮಾಂಸ ಎಂದು ವರದಿ ಬಂದಿದೆ. ಅನಾವಶ್ಯಕವಾಗಿ ದುರುದ್ದೇಶದಿಂದ ದೂರು ನೀಡಲಾಗಿದೆ ಎಂದು ಹೇಳಿದರು.
ರಾಜಸ್ಥಾನದಿಂದ ಮಾಂಸ ತಂದು ಮಾರಾಟ ಮಾಡುವುದು ಅವರ ವೃತ್ತಿ. ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ ಮಾಂಸ ಮಾರಾಟ ಮಾಡುವುದು ವೃತ್ತಿ. ಅದು ನಾಯಿ ಮಾಂಸ ಅಲ್ಲ ಮೇಕೆ ಮಾಂಸ ಎಂಬುದು ವರದಿಯಲ್ಲಿ ದೃಢವಾಗಿದೆ ಎಂದು ತಿಳಿಸಿದರು.
ಸಿಎಂ ಮೇಲೆ ಅನಾವಶ್ಯಕ ಆರೋಪ ಮಾಡಿ ಪಾದಯಾತ್ರೆ ಮಾಡುತ್ತಿದ್ದಾರೆ. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆ ಆಗಿಲ್ಲ. ಕಾನೂನು ಉಲ್ಲಂಘನೆ ಆಗಿಲ್ಲದಿದ್ದರೂ ಆಗಿದೆ ಎಂದು ಬಿಂಬಿಸಲು ಬಿಜೆಪಿಯವರು ಹೊರಟಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ನಾವು ರಾಜ್ಯದ ಜನತೆಗೆ ಸತ್ಯ ತಿಳಿಸುವ ಪ್ರಯತ್ನ ಮಾಡುತ್ತೇವೆ. ಅದಕ್ಕಾಗಿ ಮುಖ್ಯಮಂತ್ರಿಗಳು ಒಂದು ಆಯೋಗ ನೇಮಕ ಮಾಡಿದ್ದಾರೆ. ಮುಖ್ಯಮಂತ್ರಿ ಯಾವುದೇ ತಪ್ಪು ಮಾಡಿಲ್ಲ. ಯಾವುದೇ ಕಾನೂನು ಬಾಹಿರ ಕೆಲಸ ಆಗಿಲ್ಲ. ವಾಲ್ಮೀಕಿ ಹಗರಣದ ಬಗ್ಗೆ ಎಸ್ಐಟಿ, ಸಿಬಿಐ ತನಿಖೆಯಾಗುತ್ತಿದೆ. ಅದರ ವರದಿ ಬರಲಿ. ಒಂದು ವೇಳೆ ವಾಲ್ಮೀಕಿ ಹಗರಣದಲ್ಲಿ ಮಂತ್ರಿಗಳ ಅಕೌಂಟ್ ಹಣ ಹೋಗಿದೆ ಎಂದು ಸಾಬೀತಾದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.