ಬೆಂಗಳೂರು, ಜು.28(DaijiworldNews/AA): ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಮನೆಯೂಟಕ್ಕೆ ಅನುಮತಿ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆಯು ಇಂದು ಹೈಕೋರ್ಟ್ನಲ್ಲಿ ನಡೆಯಲಿದೆ.
ಮನೆಯೂಟ, ಹಾಸಿಗೆ, ಪುಸ್ತಕಗಳಿಗೆ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಜುಲೈ 25 ರಂದು ವಜಾಗೊಳಿಸಿತ್ತು. ಕೋರ್ಟ್ ಅರ್ಜಿಯನ್ನು ವಜಾಗೊಳಿಸಿದ ಬೆನ್ನಲ್ಲೇ ಹೈಕೋರ್ಟ್ನಲ್ಲಿ ದರ್ಶನ್ ಪರ ವಕೀಲರ ಅರ್ಜಿ ಸಲ್ಲಿಸಿದ್ದರು.
ಮನೆಯೂಟಕ್ಕೆ ಅನುಮತಿ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಕೋರ್ಟ್, ಕಾನೂನಿಗೆ ಎಲ್ಲರೂ ಒಂದೇ, ಕೈದಿಗಳಲ್ಲಿ ಯಾವುದೇ ಭೇದವಿಲ್ಲ. ಆಸ್ತಿ ಅಂತಸ್ತು ನೋಡಿ ಜೈಲಿನಲ್ಲಿ ಸೌಕರ್ಯ ನೀಡಲು ಸಾಧ್ಯವಿಲ್ಲ. ಅಗತ್ಯವಿದ್ದಾಗ ಮಾತ್ರ ವಿಚಾರಣಾಧೀನ ಕೈದಿಗಳಿಗೆ ಮನೆಯೂಟ ನೀಡಬಹುದು. ಆದರೆ ಕೊಲೆ ಪ್ರಕರಣದ ಆರೋಪಿಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಹೇಳಿತ್ತು.
ದರ್ಶನ್ ವಿಚಾರದಲ್ಲಿ ಮೂಲಭೂತ ಹಕ್ಕಿಗೆ ಧಕ್ಕೆ ಕಂಡು ಬಂದಿಲ್ಲ. ಜೈಲಿನ ಊಟ ಕಳಪೆ ಗುಣಮಟ್ಟ ಎಂಬ ಆರೋಪ ಕೇಳಿಬಂದಿಲ್ಲ. ದರ್ಶನ್ಗೆ ಜೈಲಿನಲ್ಲಿ ಮೂಲಭೂತ ಸೌಕರ್ಯ ನೀಡಲಾಗಿದೆ. ನ್ಯಾಯಾಂಗ ಬಂಧನ ದಿನದಿಂದಲೇ ಆರೋಗ್ಯ ಸಮಸ್ಯೆ ಒಪ್ಪಲು ಸಾಧ್ಯವಿಲ್ಲ. ದರ್ಶನ್ ದರ್ಶನ್ ಬೆನ್ನು ನೋವು ಹಾಗೂ ಕಾಲು ನೋವಿನಿಂದ ಬಳಲುತ್ತಿರುವುದರಿಂದ ಬೆಡ್ ರೆಸ್ಟ್ ಪಡೆಯಬೇಕೆಂದು ವೈದ್ಯರು ಸೂಚನೆ ನೀಡಿದ್ದಾರೆ. ಉಳಿದಂತೆ ಯಾವುದೇ ತೊಂದರೆಗಳಿಲ್ಲ.