ಬೆಂಗಳೂರು, ಜು.29(DaijiworldNews/AK): ಕಾಂಗ್ರೆಸ್ ಸರ್ಕಾರಕ್ಕೆ ನೈತಿಕತೆ ಇದ್ದರೆ, ಮಾನ ಮರ್ಯಾದೆ ಇದ್ದರೆ ಸಿಎಂ ಸೇರಿ ಎಲ್ಲರೂ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಸರ್ಕಾರದ ವಿರುದ್ಧ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಬಂದು ಒಂದೂವರೆ ವರ್ಷ ಆಗಿದೆ. ಸಾಮಾನ್ಯವಾಗಿ ಪಾದಯಾತ್ರೆ ಮಾಡೋದು ಸರ್ಕಾರ ಬಂದು 4 ವರ್ಷ ಕಳೆದ ಮೇಲೆ. ಆ ಸಮಯದಲ್ಲಿ ಲೋಪದೋಷಗಳಾಗಿದ್ದರೆ, ಸಾರ್ವಜನಿಕರ ಪರವಾಗಿ ಹೋರಾಟ ಮಾಡೋದು ಸಹಜ. ಆದರೆ ರಾಜ್ಯದ ಹಿತಾಸಕ್ತಿಯಿಂದ ಸರ್ಕಾರದ ಅಕ್ರಮ ಖಂಡಿಸಿ ವಿಪಕ್ಷಗಳು ಪಾದಯಾತ್ರೆ, ಪ್ರತಿಭಟನೆ ಮಾಡ್ತೀವಿ. ಆದರೆ ಈ ಸರ್ಕಾರ ಒಂದೂವರೆ ವರ್ಷಗಳಿಂದ ಹಗರಣಗಳಲ್ಲೇ ಮುಳುಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನಿವಾರ್ಯವಾಗಿ ಕಾಂಗ್ರೆಸ್ ಸರ್ಕಾರ ನಮ್ಮನ್ನು ಪಾದಯಾತ್ರೆ ಮಾಡಲು ದೂಡಿದೆ. ಎಸ್ಟಿ ಸಮುದಾಯದ ಹಣದ ವಾಲ್ಮೀಕಿ ಹಗರಣ ಬೆಳಕಿಗೆ ಬಂದಿದೆ. 187 ಕೋಟಿ ರೂ. ಹಣ ರಾಜ್ಯದ ಎಸ್ಟಿ ಸಮುದಾಯದ ಅಭಿವೃದ್ಧಿಗೆ ಇಟ್ಟ ಹಣವನ್ನು ರಾಜ್ಯಗಳ ಚುನಾವಣೆಗೆ ಬಳಕೆ ಮಾಡಿದ್ದಾರೆ. ಅಧಿವೇಶನದಲ್ಲಿ ಸಿಎಂ ಅವರೇ ಇದನ್ನು ಒಪ್ಪಿಕೊಂಡಿದ್ದಾರೆ ಎಂದರು.
ರೈತರಿಗೆ ಹಾಲಿನ ಪೊತ್ಸಾಹಧನವನ್ನು ಈ ಸರ್ಕಾರ 9 ತಿಂಗಳಿಂದ ಕೊಟ್ಟಿಲ್ಲ. 1200 ಕೋಟಿ ರೂ. ಹಣ ಬಾಕಿ ಉಳಿಸಿಕೊಂಡಿದೆ. ಡೆಂಗ್ಯೂನಂತಹ ಸಣ್ಣ ಕಾಯಿಲೆಯನ್ನು ನಿಯಂತ್ರಣ ಮಾಡಲು ಈ ಸರ್ಕಾರಕ್ಕೆ ಆಗ್ತಾ ಇಲ್ಲ. ಅವರ ತಪ್ಪು ಮುಚ್ಚಿಕೊಳ್ಳಲು ಸದನದಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ಲ. ಈ ಸರ್ಕಾರಕ್ಕೆ ನೈತಿಕತೆ ಇಲ್ಲ ಎಂದು ಕಿಡಿಕಾರಿದರು. ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಾವು ಆಗ್ರಹಿಸುತ್ತೇವೆ. ನಾವು ರಾಜೀನಾಮೆ ಕೊಡಿ ಅಂತ ಹೇಳಿದ ತಕ್ಷಣ ಅವರು ರಾಜೀನಾಮೆ ಕೊಡಲ್ಲ. ನಾವು ಹೋರಾಟ ಮುಂದುವರೆಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.