ಬೆಂಗಳೂರು, ಜು. 29(DaijiworldNews/AK): ಹಗರಣ ನಡೆದಿರುವುದನ್ನು ಕಾಂಗ್ರೆಸ್ ಸರಕಾರ ಒಪ್ಪಿಕೊಂಡಿದೆ. ಆದರೆ, ಮುಡಾ ಹಗರಣದ ಕುರಿತು ಚರ್ಚಿಸಲು ಧೈರ್ಯ ತೋರದ ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿಗಳು ಸದನವನ್ನು ಮೊಟಕುಗೊಳಿಸಿ ಪಲಾಯನವಾದ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದರು.
ನಗರದಲ್ಲಿ ಇಂದು ನಡೆದ ಮೈಸೂರು ಪಾದಯಾತ್ರೆಯ ಪೂರ್ವ ತಯಾರಿ ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ- ಜೆಡಿಎಸ್ ಪಕ್ಷಗಳು ಮೈಸೂರಿಗೆ ಪಾದಯಾತ್ರೆ ನಡೆಸಲಿವೆ. ಇದಕ್ಕೆ ಪೂರ್ವಭಾವಿಯಾಗಿ ಇವತ್ತು ಪ್ರಮುಖರ ಸಭೆ ನಡೆಸಿದ್ದೇವೆ. ಭ್ರಷ್ಟ ಕಾಂಗ್ರೆಸ್ ಸರಕಾರದ ಹಗರಣಗಳ ವಿರುದ್ಧ ನಡೆಸುವ ಪಾದಯಾತ್ರೆ, ಹೋರಾಟದ ಕುರಿತು ಚರ್ಚಿಸಲಾಗಿದೆ ಎಂದರು.
ಕಾರ್ಯಕರ್ತರಲ್ಲಿ ರಣೋತ್ಸಾಹ ಮೂಡಿದೆ. ಆ. 3ರಂದು ಬೆಳಿಗ್ಗೆ 8.30ಕ್ಕೆ ಪಾದಯಾತ್ರೆಯ ಉದ್ಘಾಟನೆ ನೆರವೇರಲಿದೆ. ರಾಜ್ಯದ ಹಿರಿಯ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಜೆಡಿಎಸ್ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಎರಡೂ ಪಕ್ಷಗಳ ಹಿರಿಯ ಮುಖಂಡರು ಭಾಗವಹಿಸುತ್ತಾರೆ ಎಂದು ತಿಳಿಸಿದರು.
ಕೆಂಗೇರಿ ಕೆಂಪಮ್ಮ ದೇವಸ್ಥಾನ, ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ಆ.10ರ ಶನಿವಾರ ಪಾದಯಾತ್ರೆ ಮುಕ್ತಾಯವಾಗಲಿದೆ. ಸಮಾರೋಪ ಕಾರ್ಯಕ್ರಮದಲ್ಲಿ ಕೇಂದ್ರದ ನಾಯಕರೂ ಭಾಗವಹಿಸುತ್ತಾರೆ ಎಂದು ವಿವರ ನೀಡಿದರು. ಪ್ರತಿನಿತ್ಯ ಕನಿಷ್ಠ 20 ಕಿಮೀನಷ್ಟು ಪಾದಯಾತ್ರೆ ನಡೆಸಲಿದ್ದೇವೆ ಎಂದು ವಿವರಿಸಿದರು.
ಎಲ್ಲ 224 ಕ್ಷೇತ್ರಗಳ ಕಾರ್ಯಕರ್ತರು ಭಾಗವಹಿಸುತ್ತಾರೆ. ಮೊದಲ ದಿನ ಯಶವಂತಪುರ, ದಾಸರಹಳ್ಳಿ, ಆರ್ಆರ್.ನಗರ, ವಿಜಯನಗರ, ಶಿವಾಜಿನಗರ, ದೊಡ್ಡಬಳ್ಳಾಪುರ, ಮಾಗಡಿ, ಪದ್ಮನಾಭನಗರ, ರಾಜಾಜಿನಗರ ವಿಧಾನಸಭಾ ಕ್ಷೇತ್ರಗಳ ಜನಪ್ರತಿನಿಧಿಗಳು, ಕಾರ್ಯಕರ್ತರು ಬರಲಿದ್ದಾರೆ. ಕೋಲಾರ- ಕಲಬುರ್ಗಿಯ ಕಾರ್ಯಕರ್ತರೂ ಭಾಗವಹಿಸುವರು. ಯುವಮೋರ್ಚಾದವರು ತಮ್ಮನ್ನು ಜೋಡಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.
ಪಾದಯಾತ್ರೆಯ ಯಶಸ್ಸಿಗೆ ತಂಡಗಳನ್ನು ರಚಿಸಲಾಗಿದೆ. ಮೊದಲ ದಿನ ಶಾಸಕ ಮುನಿರಾಜು ನೇತೃತ್ವ ವಹಿಸುತ್ತಾರೆ. ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಜೊತೆಗಿರುತ್ತಾರೆ ಎಂದು ವಿಜಯೇಂದ್ರ ಅವರು ವಿವರ ನೀಡಿದರು.
ರಾಜ್ಯದ ಪ್ರತಿ ಜಿಲ್ಲೆಯಿಂದ ಕನಿಷ್ಠ 200 ಜನರು ಬರಲಿದ್ದು ಎಲ್ಲ ದಿನಗಳಲ್ಲಿ ಇರುತ್ತಾರೆ. ವಸತಿ ವ್ಯವಸ್ಥೆ ಸೇರಿ ಎಲ್ಲವನ್ನೂ ಯೋಜಿಸಲಾಗಿದೆ. ಜೆಡಿಎಸ್ನವರೂ ಪಾಲ್ಗೊಳ್ಳಲಿದ್ದು, ಬಿಜೆಪಿ- ಜೆಡಿಎಸ್ ಪಕ್ಷಗಳ ಸಮನ್ವಯ ಸಮಿತಿ ರಚಿಸುತ್ತೇವೆ ಎಂದು ತಿಳಿಸಿದರು.
ರಾಜ್ಯದ್ದು ಭ್ರಷ್ಟ ಕಾಂಗ್ರೆಸ್ ಪಕ್ಷದ ಹಗರಣಗಳ ಸರಕಾರ; ಇದರ ನೇತೃತ್ವವನ್ನು ಸಿದ್ದರಾಮಯ್ಯನವರು ವಹಿಸಿದ್ದಾರೆ. ಎಲ್ಲ ಹಗರಣಗಳಲ್ಲೂ ಅಹಿಂದ ಸಮುದಾಯಕ್ಕೇ ಅನ್ಯಾಯ ಮಾಡಿದ್ದಾರೆ. ಇದರ ವಿರುದ್ಧ ‘ಮೈಸೂರು ಚಲೋ’ ನಡೆಸಲಿದ್ದೇವೆ ಎಂದರು.ಹಣವನ್ನು ವಾಪಸ್ ಪಡೆದು ಅದೇ ಸಮುದಾಯಗಳಿಗೆ ನೀಡುವ ಬಗ್ಗೆ ಒತ್ತಾಯಿಸುತ್ತೇವೆ. ಮೂಡದಲ್ಲಿ 3ರಿಂದ 4 ಸಾವಿರ ಕೋಟಿಯ ಹಗರಣ ನಡೆದುದನ್ನು ಮುಡಾ ಅಧ್ಯಕ್ಷ ಮರಿಗೌಡರೂ ಒಪ್ಪಿಕೊಂಡಿದ್ದಾರೆ. ಬಡವರು, ಪರಿಶಿಷ್ಟರಿಗೆ ನ್ಯಾಯ ದೊರಕಿಸಲು ಈ ಹೋರಾಟ ನಡೆಯಲಿದೆ ಎಂದು ನುಡಿದರು.
ಹೋರಾಟ ಹತ್ತಿಕ್ಕುವ ಶಕ್ತಿ ರಾಜ್ಯ ಸರಕಾರಕ್ಕೆ ಇಲ್ಲ..
ನಮ್ಮ ಹೋರಾಟವನ್ನು ಹತ್ತಿಕ್ಕುವ ಶಕ್ತಿ ರಾಜ್ಯ ಸರಕಾರಕ್ಕೆ ಇಲ್ಲ. ಭ್ರಷ್ಟ ಕಾಂಗ್ರೆಸ್ ಸರಕಾರ ನಮ್ಮ ಈ ಹೋರಾಟ ತಡೆಯಲು ಸಾಧ್ಯವಿಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ಸಿಗರು ಮೇಕೆದಾಟು ಪಾದಯಾತ್ರೆ ಮಾಡಿದ್ದಾರಲ್ಲವೇ? ಸದನದಲ್ಲಿ ಮುಡಾ ಬಗ್ಗೆ ಯಾಕೆ ಚರ್ಚೆ ಮಾಡಿಲ್ಲ ಎಂದು ವಿಜಯೇಂದ್ರ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಮುಖ್ಯಮಂತ್ರಿಗಳು 2 ಗಂಟೆ ಪತ್ರಿಕಾಗೋಷ್ಠಿ ನಡೆಸಿ ಉತ್ತರ ಕೊಡುತ್ತಾರೆ. ಆದರೂ ಸದನದಲ್ಲಿ ವಿಪಕ್ಷಗಳು ಎತ್ತಿದ ಪ್ರಶ್ನೆಗಳಿಗೆ ಸದನದಲ್ಲೇ ಉತ್ತರ ಕೊಟ್ಟಿಲ್ಲ ಎಂದು ಟೀಕಿಸಿದರು. ಸದನ ಮೊಟಕುಗೊಳಿಸಿದ್ದನ್ನು ಆಕ್ಷೇಪಿಸಿದರು.
ಹೋರಾಟಕ್ಕೆ ಯಶಸ್ಸು ಸಿಗಲಿದೆ ಎಂದೂ ಅವರು ಪ್ರಶ್ನೆಗೆ ಉತ್ತರಿಸಿದರು. ಇದು ಹಗರಣಗಳ ವಿರುದ್ಧ ಹೋರಾಟ ಎಂದರು. ಮಾಧ್ಯಮ ಪ್ರತಿನಿಧಿಗಳ ಸಹಕಾರಕ್ಕೆ ಮನವಿ ಮಾಡಿದರು.ನಮ್ಮದು ಕಾಟಾಚಾರದ ಹೋರಾಟವಲ್ಲ; ಮಂಡಲ, ಜಿಲ್ಲೆ, ರಾಜ್ಯ ಮಟ್ಟದ ಹೋರಾಟ ನಡೆದಿದೆ. ನೆರೆಪೀಡಿತ ಪ್ರದೇಶಗಳಿಗೆ 6 ತಂಡಗಳು ಇದೇ ಮಂಗಳವಾರದಿಂದ ಪ್ರವಾಸ ಮಾಡಲಿವೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.