ಬೆಂಗಳೂರು, ಜು.30(DaijiworldNews/AK): ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ಮುಡಾ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ಮುಂದುವರಿಸಿದೆ.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿಯೂ ಟೀಕಾ ಪ್ರಹಾರ ನಡೆಸಿದ್ದಾರೆ. ಒಲಂಪಿಕ್ಸ್ ಜತೆ ಹೋಲಿಸಿ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿರುವ ಬಿಜೆಪಿ, ಸಿಎಂ ಸಿದ್ದರಾಮಯ್ಯಗೆ ಭ್ರಷ್ಟಾಚಾರದಲ್ಲಿ ಚಿನ್ನದ ಪದಕ ದೊರೆಯಬಹುದು ಎಂದು ವ್ಯಂಗ್ಯವಾಡಿದೆ.
ಒಲಂಪಿಕ್ಸ್ನಲ್ಲಿ ಭ್ರಷ್ಟಾಚಾರದ ಪಂದ್ಯ ಏರ್ಪಡಿಸಿದಲ್ಲಿ ಭ್ರಷ್ಟಾಚಾರದ ಪಿತಾಮಹನಿಗೆ ಚಿನ್ನದ ಪದಕ ಖಚಿತ-ನಿಶ್ಚಿತ-ಖಂಡಿತ ಎಂದು ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ನಾಗೇಂದ್ರ ಹಾಗೂ ಶಾಸಕ ಬಸನಗೌಡ ದದ್ದಲ್ ಫೋಟೊವನ್ನು ಬಿಜೆಪಿ ಪೋಸ್ಟ್ ಮಾಡಿದೆ. ಇದರಲ್ಲಿ ಸಿದ್ದರಾಮಯ್ಯ ಚಿನ್ನದ ಪದಕ, ನಾಗೇಂದ್ರ ಬೆಳ್ಳಿ ಹಾಗೂ ದದ್ದಲ್ ಕಂಚಿನ ಪದಕ ಧರಿಸಿರುವ ಎಡಿಟೆಡ್ ಫೊಟೊವನ್ನು ಹಾಕಲಾಗಿದೆ.
ಈ ಮಧ್ಯೆ, ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ತೆರಳಿದ್ದಾರೆ. ಆ ಬಗ್ಗೆಯೂ ಕುಹಕವಾಡಿರುವ ಬಿಜೆಪಿ ವ್ಯಂಗ್ಯ ಚಿತ್ರವೊಂದನ್ನು ಪೋಸ್ಟ್ ಮಾಡಿದೆ.ನೆರೆಯಿಂದ ಹಾನಿಗೊಳಗಾದ ಕನ್ನಡಿಗರ ಕಂಬನಿ ಒರೆಸುವುದಕ್ಕಿಂತಲೂ, ಹೈಕಮಾಂಡ್ಗೆ ಕಪ್ಪ ತಲುಪಿಸುವ ಕಾರ್ಯದಲ್ಲಿ ಮಗ್ನವಾಗಿರುವ ಸಿಎಂ-ಡಿಸಿಎಂ ಎಂದು ಬಿಜೆಪಿ ವ್ಯಂಗ್ಯವಾಡಿದೆ.