ತಿರುವನಂತಪುರಂ, ಜು.31(DaijiworldNews/AA): ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 146ಕ್ಕೆ ಏರಿಕೆಯಾಗಿದೆ. ನೂರಾರು ಮಂದಿ ಇನ್ನೂ ಅವಶೇಷಗಳಡಿ ಸಿಲುಕಿರುವುದರಿಂದ, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗಿದೆ.
ಕುಸಿತದಿಂದ ಹಲವು ಮನೆಗಳು, ಮರಗಳು, ಹಸು, ನಾಯಿಗಳು, ಜನರು ಸೇರಿದಂತೆ ಎಲ್ಲವೂ ಕೊಚ್ಚಿಹೋಗಿವೆ. ಕೋಳಿಕ್ಕೋಡ್ನಲ್ಲಿ 9 ಬಾರಿ ಭೂಕುಸಿತ ಸಂಭವಿಸಿದೆ ಎನ್ನಲಾಗಿದೆ. ವಯನಾಡ್ ಮತ್ತು ಕೇರಳದ ಎಲ್ಲಾ ಉತ್ತರ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಭೂಕುಸಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ನೆರವು ನೀಡುವುದಾಗಿ ಘೋಷಿಸಿದ್ದಾರೆ. ಸೇನೆ ಮತ್ತು ಎನ್ಡಿಆರ್ಎಫ್ ಸೇರಿದಂತೆ ರಕ್ಷಣಾ ಏಜೆನ್ಸಿಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.
ಇನ್ನು ಈವರೆಗೆ ದೊರೆತ ಮೃತದೇಹಗಳಲ್ಲಿ 48 ಜನರ ಮೃತದೇಹಗಳನ್ನು ಗುರುತಿಸಲಾಗಿದೆ. ಪತ್ತೆಯಾದ ದೇಹಗಳ ಪೈಕಿ 96 ಮೃತದೇಹಗಳ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಗುರುತು ಪತ್ತೆಯಾದ 32 ಮಂದಿಯ ಮೃತದೇಹಗಳನ್ನು ಅವರ ಸಂಬAಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.