ರಾಜಸ್ಥಾನ, ಜು.31(DaijiworldNews/AA): ಸಾಧಿಸುವ ಛಲ ಹಾಗೂ ಸ್ಪಷ್ಟವಾದ ಗುರಿ ಇದ್ದರೆ ಏನನ್ನಾದರೂ ಸಾಧಿಸಬಹುದು. ಹೀಗೆ ಐಎಎಸ್ ಅಧಿಕಾರಿಯಾಗುವ ಉದ್ದೇಶದಿಂದ ವಿದೇಶದಿಂದ ಮರಳಿ ಐಇಎಸ್, ಐಆರ್ಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಬಳಿಕ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದ ಅದಿತಿ ಗಾರ್ಗ್ ಅವರ ಯಶೋಗಾಥೆ ಇದು.
ಅದಿತಿ ಗಾರ್ಗ್ ಅವರು ರಾಜಸ್ಥಾನದ ಜೈಪುರದಲ್ಲಿ ಜನಿಸಿದರು. ಅವರ ತಂದೆ ಒಪಿ ಗಾರ್ಗ್. ಅದಿತಿ ಅವರ ತಂದೆ ಮಧ್ಯಪ್ರದೇಶದ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ.
2004 ರಲ್ಲಿ ಮುಂಬೈ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು. ನಂತರ 2006ರಲ್ಲಿ ಅವರು ಯುಕೆಯ ವಾರ್ವಿಕ್ ವಿಶ್ವವಿದ್ಯಾಲಯಕ್ಕೆ ತೆರಳಿ, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.
ಅದಿತಿ ಗಾರ್ಗ್ ಯುಕೆಯಿಂದ ಭಾರತಕ್ಕೆ ಹಿಂದಿರುಗಿದ ಬಳಿಕ ಮೊದಲು ಐಇಎಸ್ ಅಧಿಕಾರಿಯಾಗಿ ನಂತರ ಐಆರ್ಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಐಎಎಸ್ ಅಧಿಕಾರಿಯಾಗುವ ಉದ್ದೇಶದಿಂದ 2015ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆಯುತ್ತಾರೆ. ಯುಪಿಎಸ್ಸಿ ಪರೀಕ್ಷೆಯಲ್ಲಿ 54ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ.
ಮಧ್ಯಪ್ರದೇಶ ಸರ್ಕಾರ ಇತ್ತೀಚೆಗೆ ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ಈ ವೇಳೆ ಐಎಎಸ್ ಅಧಿಕಾರಿ ಅದಿತಿ ಅವರು ಹೆಸರು ಹೆಚ್ಚು ಸುದ್ದಿಯಾಗಿತ್ತು. ಪ್ರಸ್ತುತ ಅವರು ಮಂಡಸೌರ್ ಕಲೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಅವರು ಮುಖ್ಯಮಂತ್ರಿ ಕಚೇರಿಯಲ್ಲಿ ಉಪ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.