ಚೆನ್ನೈ, ಮೇ 18(Daijiworld News/MSP): ನಾಥೂರಾಂ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಹಿಂದೂ ಉಗ್ರ ಎಂದು ಹೇಳಿ ವಾದದ ಕಿಡಿ ಹೊತ್ತಿಸಿದ್ದ ನಟ ಹಾಗೂ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಅವರ ಹೇಳಿಕೆ ವಿವಾದ ಇನ್ನು ಹಸಿರಾಗಿರುವಂತೆಯೇ ಇದೀಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
‘ಹಿಂದೂ’ ಎಂಬ ಪದದ ಮೂಲ ಭಾರತವಲ್ಲ. ಅದು ವಿದೇಶಿಯರ ಕೊಡುಗೆ" ಎಂದು ಹೇಳಿದ್ದಾರೆ. ಹಿಂದು ಎಂದು ವಿದೇಶಿಯರು ಯಾರೋ ಅಜ್ಞಾನದಿಂದ ಹೇಳಿದ ಪದವನ್ನು ಒಂದು ಮತಕ್ಕೆ, ಒಂದು ದೇಶಕ್ಕೆ ಅಳವಡಿಸುವುದು ಎಷ್ಟು ಸರಿ ? ಎಂದು ಪ್ರಶ್ನಿಸಿದ್ದಾರೆ.
ಭಾರತದಲ್ಲಿದ್ದ ವೈಷ್ಣವರಾಗಲಿ, ಶೈವ ಕವಿಗಳಾಗಲಿ, ದಕ್ಷಿಣ ಭಾರತದ ಸಂತರು ‘ಹಿಂದೂ’ ಎಂಬ ಪದವನ್ನು ಎಲ್ಲಿಯೂ ಉಲ್ಲೇಖಿಸಿಲ್ಲ. ಹಿಂದೂ ಎಂಬ ಪದವನ್ನು ಮೊಘಲರು ಇಲ್ಲವೇ ವಿದೇಶಿಯರು ನಾಮಕರಣ ಮಾಡಿದ್ದಾರೆ. ಮೊಘಲರೋ ಅಥವಾ ಭಾರತಕ್ಕೆ ಬಂದ ಇನ್ನ್ಯಾರೋ ಈ ಪದವನ್ನು ನೀಡಿದರು. ಅಲ್ಲಿಯವರೆಗೂ ಇಂಥದೊಂದು ಪದವೇ ಇರಲಿಲ್ಲ. ಭಾರತೀಯರಿಗೆ ಸಾಕಷ್ಟು ಪದಗಳಿರುವಾಗ ನಾವು ಯಾಕೆ ವಿದೇಶದಿಂದ ಎರವಲು ಪಡೆದ ಪದವನ್ನು ಒಂದು ಧರ್ಮಕ್ಕೆ ಬಳಸಬೇಕು ಎಂದು ತಮಿಳಿನಲ್ಲಿ ಟ್ವೀಟ್ ಮಾಡಿದ್ದಾರೆ. ಸದ್ಯ, ಕಮಲ್ರ ಈ ಟ್ವೀಟ್ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.