ಹಾಸನ, ಜು.31(DaijiworldNews/AA): ಕಾಂಗ್ರೆಸ್ ಸರ್ಕಾರವನ್ನ ಬುಡಮೇಲು ಮಾಡಲು ಬಿಜೆಪಿ- ಜೆಡಿಎಸ್ ಇಬ್ಬರೂ ಸೇರಿ ಏನಾದರೂ ಮಾಡಿ ಯತ್ನಿಸುತ್ತಿದ್ದಾರೆ. ಚುನಾಯಿತ ಸರ್ಕಾರವನ್ನು ಸಂವಿಧಾನ ವಿರುದ್ಧವಾಗಿ ಬುಡಮೇಲು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಆರೋಪಿಸಿದ್ದಾರೆ.
ಹಾಸನ ಸಕಲೇಶಪುರದ ದೊಡ್ಡತಪ್ಲುವಿನಲ್ಲಿ ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡಿದ ಅವರು, ನಮ್ಮ ಸರ್ಕಾರವನ್ನು ಬುಡಮೇಲು ಮಾಡಲು ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಂಡು ನಮ್ಮ ಸರ್ಕಾರವನ್ನು ಬುಡಮೇಲು ಮಾಡಲು ಹೋದರೆ ನಾವು ಸುಪ್ರೀಂ ಕೋರ್ಟ್ಗೆ ಹೋಗಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇಡಿ ಬಿಜೆಪಿಯ ಪೊಲಿಟಿಕಲ್ ವಿಂಗ್ ಆಗಿದೆ. ಇಡಿಯವರು ಬಂದು ತಪ್ಪು ಮಾಡಿರುವವರಿಗೆ ರಕ್ಷಣೆ ಕೊಡುತ್ತೇವೆ. ನೀವು ಸಿಎಂ ಮೇಲೆ ಹೇಳಿಕೆ ಕೊಡಿ ಅಂತಾರೆ. ತಪ್ಪು ಮಾಡಿರುವವರನ್ನು ರಕ್ಷಣೆ ಮಾಡಿ ಹಗರಣ ಮುಚ್ಚಿ ಹಾಕಿ ಸಿಎಂ ತಲೆಗೆ ಕಟ್ಟಬೇಕು ಎನ್ನುವುದು ಅವರ ಉದ್ದೇಶ ಎಂದು ಅವರು ಕಿಡಿಕಾರಿದ್ದಾರೆ.
ಹಗರಣದ ಹಿಂದೆ ಇರುವವರನ್ನು ಪತ್ತೆ ಮಾಡಿ ಶಿಕ್ಷೆ ಕೊಡಲು ಅವರು ಬಂದಿಲ್ಲ. ಈ ಹಗರಣವನ್ನು ಉಪಯೋಗಿಸಿಕೊಂಡು ನಮ್ಮ ರಾಜ್ಯದಲ್ಲಿರುವ ಸರ್ಕಾರವನ್ನು ಬುಡಮೇಲು ಮಾಡಬೇಕು ಎನ್ನುವುದು ಅವರ ಉದ್ದೇಶವಾಗಿದೆ. ಬೇರೆ ರಾಜ್ಯಗಳಲ್ಲೂ ಇದೇ ರೀತಿ ಇಡಿ ಉಪಯೋಗಿಸಿಕೊಂಡು ಸರ್ಕಾರ ಅಸ್ಥಿರಗೊಳಿಸಿದ್ದಾರೆ. ಕರ್ನಾಟಕದಲ್ಲೂ ತನಿಖಾ ಸಂಸ್ಥೆಯನ್ನು ಉಪಯೋಗಿಸಿಕೊಂಡು ನಮ್ಮ ಸರ್ಕಾರವನ್ನು ಬುಡಮೇಲು ಮಾಡಲು ಕುತಂತ್ರದಿಂದ ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.