ಡೆಹ್ರಡೂನ್, ಮೇ 18(Daijiworld News/MSP) : ಒಂದು ತಿಂಗಳ ಚುನಾವಣೆಯ ಪ್ರಚಾರದ ಭರ್ಜರಿ ಓಡಾಟದ ಬಳಿಕ ಲೋಕಸಭೆ ಚುನಾವಣಾ ಫಲಿತಾಂಶಕ್ಕೂ ಮುಂಚಿತವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕೇದಾರನಾಥ್ ಹಾಗೂ ಬದ್ರಿನಾಥ್ ಪುಣ್ಯಧಾಮಗಳಿಗೆ ಎರಡು ದಿನಗಳ ಆಧ್ಯಾತ್ಮಿಕ ಪ್ರವಾಸ ಕೈಗೊಂಡಿದ್ದಾರೆ.
ಈ ಹಿನ್ನಲೆಯಲ್ಲಿ ಶನಿವಾರ ಕೇದಾರನಾಥ್ ದೇವಾಲಯಕ್ಕೆ ಭೇಟಿ ನೀಡಿದ ಅವರು, ವಿಶೇಷ ಪ್ರಾರ್ಥನೆ ಸಲ್ಲಿಸಿ ತಾವೇ ಖುದ್ದು ರುದ್ರಾಭಿಷೇಕ ಮಾಡಿದರು.
ಆ ನಂತರ ಅಲ್ಲಿ ನಡೆಯುತ್ತಿರುವ ಕೇದರಿನಾಥ ಪುನರ್ ನಿರ್ಮಾಣ ಕಾಮಗಾರಿಗಳನ್ನು ಪರಿಶೀಲಿಸಿದರು. ಆ ಬಳಿಕ ಪ್ರಧಾನಿ ಮೋದಿ, ಕೇದಾರನಾಥ ದೇವಸ್ಥಾನದಿಂದ ಸುಮಾರು 1000 ಅಡಿ ಎತ್ತರದಲ್ಲಿರೋ ಪವಿತ್ರ ಗುಹೆಯ ಬಳಿ ಪ್ರಯಾಣ ಬೆಳೆಸಿದರು. ವಿಶೇಷ ಎಂದರೆ ಮೋದಿ ದಿನ ಪೂರ್ತಿ ಗುಹೆಯಲ್ಲಿ ಧ್ಯಾನ ಮಾಡಲಿದ್ದಾರೆ.
ಭಾನುವಾರದಂದು ಬದ್ರಿನಾಥ್ ದೇವಾಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಅಲ್ಲಿ ದೇವರ ದರ್ಶನ ಪಡೆದು ಅಲ್ಲಿನ ಕೆಲಸ ಕಾರ್ಯಗಳನ್ನು ಪರಿಶೀಲಿಸಲಿದ್ದಾರೆ . 2014 ರಲ್ಲಿ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕೇದರಿನಾಥ್ ಗೆ ಭೇಟಿ ನೀಡುತ್ತಿರುವುದು ಇದು ನಾಲ್ಕನೇ ಬಾರಿ. ಬದರಿನಾಥ್ ಗೆ ಇದೇ ಮೊದಲ ಬಾರಿಯಾಗಿದೆ.