ಬೆಂಗಳೂರು, ಆ.02DaijiworldNews/AA): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಹೋರಾಟಗಾರ ಟಿಜೆ ಅಬ್ರಹಾಂ ಇದೀಗ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2004ರಲ್ಲಿ ಸಿದ್ದರಾಮಯ್ಯ ಕುಟುಂಬ ಜಮೀನು ಖರೀದಿ ಮಾಡಿದಾಗ ಕೆಸರೆಯಲ್ಲಿ ಕೃಷಿ ಜಮೀನೇ ಇರಲಿಲ್ಲ. 2004ರಲ್ಲಿ ಕೆಸರೆ ಗ್ರಾಮದ 3.16 ಎಕರೆ ಭೂಮಿ ಮಂಜುನಾಥ್ ಸ್ವಾಮಿ ಹೆಸರಿಗೆ ನೋಂದಣಿಯಾಗುತ್ತದೆ. ಆ ಜಾಗ 2001ರಲ್ಲಿಯೇ ದೇವರಾಜ ಬಡಾವಣೆ ಆಗಿತ್ತು. ಆ ಹೆಸರಿನಲ್ಲಿ ಸೈಟು ಮಾಡಿ ಜನರಿಗೆ ನೀಡಿದ್ದರು. ಯಾರಿಗೋ ಹಂಚಿಕೆಯಾಗಿದ್ದ ಸೈಟನ್ನು ನನ್ನ ಕೃಷಿ ಜಮೀನು ಅಂತ ಮಾಡಬಹುದಾ? ಎಂದು ಪ್ರಶ್ನಿಸಿದ್ದಾರೆ.
ವಿಧಾನಸೌದ ಇದ್ದ ಜಾಗ ಹಿಂದೆ ನನ್ನ ಕೃಷಿ ಜಮೀನು ಆಗಿತ್ತು ಅಂತ ನಾನು ದಾಖಲೆ ನೀಡಿದರೆ ಸಿದ್ದರಾಮಯ್ಯ ಅವರು ಒಪ್ಪಿಕೊಳ್ಳುತ್ತಾರೆಯೇ? ಕೃಷಿ ಭೂಮಿ ಇಲ್ಲದೇ ಇರುವ ಜಾಗ ಕೃಷಿ ಜಮೀನು ಎಂದು ಮಾರಾಟ ಮಾಡಬಹುದಾ? ಸೈಟುಗಳನ್ನು ಪಡೆದವರ ಹೆಸರಿನಲ್ಲಿ ಇವರು ಕಂದಾಯ ಕಟ್ಟುತ್ತಾ ಇದ್ದರೇ? ರಸ್ತೆ ಮಾಡಿ ಸೈಟು ಮಾಡಿ ಹಂಚಿರುವ ಜಾಗಕ್ಕೆ ಇವರು ಕನ್ವರ್ಷನ್ ಮಾಡಿಸಿಕೊಡುತ್ತಾರಾ ಎಂದು ಅವರು ಕೇಳಿದ್ದಾರೆ.
ಡಿಸಿ ಖುದ್ದಾಗಿ ಸ್ಥಳಕ್ಕೆ ಭೇಟಿ ಕೊಟ್ಟಿದ್ದರಂತಲ್ಲವೇ? ಆಗ ಸೈಟು ಕಾಣಿಸಲಿಲ್ಲವೇ? ಅದೇ ಸಮಯದಲ್ಲಿ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು. ಆಗ ಪ್ರಭಾವ ಬಳಸಲಿಲ್ವಾ? ಇದೇ ಜಮೀನು ಡಿನೋಟಿಫೈ ಆದಾಗಲೂ ಡಿಸಿಎಂ ಆಗಿರಲಿಲ್ವಾ ಸಿದ್ದರಾಮಯ್ಯ? ಭ್ರಷ್ಟಾಚಾರ ತಡೆ ಕಾಯ್ದೆಯಡಿ ನೇರವಾಗಿ ಅವರದೇ ಸಹಿ ಇರಬೇಕು ಅಂತಿಲ್ಲ. 2010ರಲ್ಲಿ ಗಿಫ್ಟ್ ಡೀಡ್ ಆದಾಗ ಕೃಷಿ ಭೂಮಿ ಅಂತ ನಮೂದು ಮಾಡಿತ್ತಾರೆ. 2001ರಲ್ಲಿ ಬಡಾವಣೆ ಆದ ಜಾಗಕ್ಕೆ 2010ರಲ್ಲಿ ರಲ್ಲಿ ಕೃಷಿ ಭೂಮಿ ಅಂತ ನಮೂದು ಮಾಡಿದ್ದರು ಎಂದಿದ್ದಾರೆ.
ಪಾರ್ವತಿ ಸಿದ್ದರಾಮಯ್ಯ ಅಣ್ಣ ಕೊಂಡುಕೊಂಡಿದ್ದಾರೆ ಎಂಬ ಜಮೀನು ಅಲ್ಲಿ ಇಲ್ಲವೇ ಇಲ್ಲ. ಇಲ್ಲದೇ ಇರುವ ಭೂಮಿಗೆ ಸೈಟು ಹಂಚಿಕೆ ಮಾಡಿಕೊಂಡಿದ್ದಾರೆ. ಇಲ್ಲದೇ ಇರುವ ಭೂಮಿಗೆ ಪರಿಹಾರ ಕೇಳಿದ್ದಾರೆ. ಸಿದ್ದರಾಮಯ್ಯ ನನ್ನ ಜಮೀನು ಬಿಟ್ಟುಕೊಡ್ಲಾ ಅಂತ ಕೇಳಿದರು. ಇಲ್ಲದೇ ಇರುವ ಜಮೀನಿಗೆ ಪರಿಹಾರವೇ? ಸಾಮಾನ್ಯ ಜನರಿಗೆ ಇದು ಸಾಧ್ಯಾವೇ? ಎಂದು ಪ್ರಶ್ನೆ ಮಾಡಿದ್ದಾರೆ.