ನವಹೆದಲಿ,ಮೇ19(DaijiworldNews/AZM):ಇನ್ನು ಮೊಬೈಲ್ ಗಳಲ್ಲಿ ಉಚಿತವಾಗಿ ಟಿವಿ ಚಾನೆಲ್ ಗಳನ್ನು ವೀಕ್ಷಿಸುವ ಹಾಗೆ ಇಲ್ಲ. ಯಾಕೆಂದರೆ ಟಿವಿ ಚಾನಲ್ ಬ್ರಾಡ್ ಕಾಸ್ಟರ್ ಗಳಿಗೆ ಅನ್ವಯಿಸುವಂತಹ ನಿಯಮಗಳನ್ನು ಆಪ್ ಗಳಿಗೂ ವಿಸ್ತರಿಸಲು ಟ್ರಾಯ್ ನಿರ್ಧರಿಸಿದೆ.
ವೂಟ್, ಹಾಟ್ ಸ್ಟಾರ್, ಏರ್ ಟೆಲ್ ಟಿವಿ, ಸ್ಟಾರ್ ಇಂಡಿಯಾ ಸೇರಿದಂತೆ ಅನೇಕ ಆಪ್ ಗಳಲ್ಲಿ ಟಿವಿ ಚಾನಲ್ ಗಳನ್ನು ಉಚಿತವಾಗಿ ನೋಡಬಹುದಾಗಿದೆ. ಈ ಆಪ್ ಗಳಿಗೆ ಲೈಸೆನ್ಸ್ ನಿಯಮವಿಲ್ಲ. ಈ ಹಿನ್ನೆಲೆಯಲ್ಲಿ ಟ್ರಾಯ್ ನಿಂದ ಆಪ್ ಗಳಿಗೂ ನಿಯಮ ವಿಧಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ.
ಕೇಬಲ್ ಟಿವಿ ಮತ್ತು ಡಿಟಿಹೆಚ್ ಗಳಿಗೆ ಹೊಸ ಶುಲ್ಕ ನಿಯಮವನ್ನು ಜಾರಿಗೆ ತಂದಿರುವ ಟ್ರಾಯ್ ಈಗ ಉಚಿತ ಟಿವಿ ಚಾನೆಲ್ ಗಳ ಸೇವೆಯನ್ನು ನೀಡುವ ಆಪ್ ಗಳ ಮೇಲೆ ಗಮನ ಹರಿಸಿದೆ ಎನ್ನಲಾಗಿದೆ.
ಆಪ್ ಗಳು ಐಟಿ ಕಾಯ್ದೆ ವ್ಯಾಪ್ತಿಗೆ ಬರುತ್ತವೆ. ಆದರೆ, ಲೈಸೆನ್ಸ್ ಹೊಂದಿರುವುದಿಲ್ಲ. ಆಪ್ ನಿಯಂತ್ರಿಸುವ ಅಧಿಕಾರ ಟ್ರಾಯ್ ವ್ಯಾಪ್ತಿಗೆ ಬರಲ್ಲ ಎನ್ನುವುದು ಆಪ್ ಪ್ರತಿನಿಧಿಗಳ ಅಭಿಪ್ರಾಯವಾಗಿದೆ. ಅವುಗಳಲ್ಲಿ ಯಾವುದೇ ಶುಲ್ಕವಿಲ್ಲದೆ ಚಾನೆಲ್ ಗಳ ವೀಕ್ಷಣೆಗೆ ಅವಕಾಶವಿರುತ್ತದೆ. ಲೈಸೆನ್ಸ್ ಇಲ್ಲದೆ ಆಪ್ ಗಳು ಟಿವಿ ಚಾನೆಲ್ ಪ್ರಸಾರ ಮಾಡುತ್ತಿವೆ ಎಂದು ಟ್ರಾಯ್ ಅಧಿಕಾರಿಗಳು ಹೇಳಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.