ನವದೆಹಲಿ, ಮೇ19(Daijiworld News/SS): ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಎರಡೂ ಕಡೆಗಳಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಸಿಗಲಿವೆ, ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಸರಕಾರವೇ ರಚನೆಯಾಗಲಿದೆ ಎಂದು ಸಿ-ವೋಟರ್ ಸಮೀಕ್ಷೆ ಹೇಳಿದೆ.
287 ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಗೆಲುವು ಸಾಧಿಸಲಿದೆ ಎಂದು ಸಿ-ವೋಟರ್ ಭವಿಷ್ಯ ನುಡಿದಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ 128 ಸ್ಥಾನಗಳನ್ನು ಗೆಲ್ಲುವಲ್ಲಿ ತೃಪ್ತಿ ಪಡುವ ಸಾಧ್ಯತೆ ಇದೆ ಎಂದಿದೆ. ಕರ್ನಾಟಕದಲ್ಲಿ ಬಿಜೆಪಿ 18, ಕಾಂಗ್ರೆಸ್ 7, ಜೆಡಿಎಸ್ 2 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ.
2014ರ ಚುನಾವಣೆಯಲ್ಲಿ ಎನ್ಡಿಎ 334, ಯುಪಿಎ 59, ಇತರರು 150 ಸ್ಥಾನಗಳನ್ನು ಗೆದ್ದಿದರು. ಕರ್ನಾಟಕದಲ್ಲಿ ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆಯ ಅಂತಿಮ ಚರಣ ಇದೀಗ ಮುಕ್ತಾಯಗೊಂಡಿದ್ದು, ಇನ್ನು ಫಲಿತಾಂಶದ ಬಗ್ಗೆ ಕ್ಷಣಗಣನೆ ಆರಂಭವಾಗಿದೆ. ಜಗತ್ತಿನಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಬೃಹತ್ ಪ್ರಜಾತಂತ್ರದ ಹಬ್ಬದ ಬಗ್ಗೆ ವಿಶ್ವವೇ ಕುತೂಹಲದಿಂದ ಕಾದು ನೋಡುತ್ತಿದೆ.