ಕೋಲ್ಕತಾ, ಮೇ19(Daijiworld News/SS): ಚುನಾವಣೋತ್ತರ ಸಮೀಕ್ಷೆಗಳು ಗಾಸಿಪ್ ಇದ್ದಂತೆ, ನಂಬಲು ಸಾಧ್ಯವಿಲ್ಲ ಎಂದು ಚುನಾವಣೋತ್ತರ ಸಮೀಕ್ಷೆಗಳ ಕುರಿತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಚುನಾವಣೋತ್ತರ ಸಮೀಕ್ಷೆಗಳಿಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಮಮತಾ ಬ್ಯಾನರ್ಜಿ, ನಾನು ಯಾವುದೇ ರೀತಿಯ ಚುನಾವಣೋತ್ತರ ಸಮೀಕ್ಷೆಗಳನ್ನು ನಂಬುವುದಿಲ್ಲ. ಒಂದು ಸಮೀಕ್ಷೆಗಳು ನಮ್ಮ ಪರವಾಗಿ ಬಂದರೂ ನಾನು ಅವನ್ನು ನಂಬುವುದಿಲ್ಲ. ನಾವು ಈ ಹೋರಾಟವನ್ನು ಒಟ್ಟಾಗಿ ನಡೆಸಿದ್ದು, ಫಲಿತಾಂಶ ಹೇಗೇ ಬಂದರೂ ಒಟ್ಟಾಗಿ ಎದುರಿಸುತ್ತೇವೆ ಎಂದು ಹೇಳಿದ್ದಾರೆ.
ಮೋದಿ ಮತ್ತು ಶಾ ತಂಡ ಚುನಾವಣೆಯಲ್ಲಿ ಬಳಿಸಿದ್ದ ತಮ್ಮ ಕುತಂತ್ರವನ್ನೇ ಚುನಾವಣೋತ್ತರ ಸಮೀಕ್ಷೆಗಳಲ್ಲೂ ಬಳಿಸಿರುವ ಸಾಧ್ಯತೆ ಇದೆ. ಚುನಾವಣೋತ್ತರ ಸಮೀಕ್ಷೆಗಳನ್ನು ತಮ್ಮ ಪರ ಮಾಡಿಕೊಂಡು ಈ ಗ್ಯಾಪ್'ನಲ್ಲಿ ಇವಿಎಂಗಳನ್ನು ತಿರುಚುವ ಅಥವಾ ಬದಲಿ ಇವಿಎಂಗಳನ್ನು ಸೇರಿಸುವ ಹುನ್ನಾರ ನಡೆದಿದೆ. ಈ ಬಗ್ಗೆ ನಾವು ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ಹೇಳಿದ್ದಾರೆ.
ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಎರಡೂ ಕಡೆಗಳಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಸಿಗಲಿವೆ, ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಸರಕಾರವೇ ರಚನೆಯಾಗಲಿದೆ ಎಂದು ಸಿ-ವೋಟರ್ ಸಮೀಕ್ಷೆ ಹೇಳಿದೆ. 287 ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಗೆಲುವು ಸಾಧಿಸಲಿದೆ ಎಂದು ಸಿ-ವೋಟರ್ ಭವಿಷ್ಯ ನುಡಿದಿದೆ.