ತಿರುವನಂತಪುರ,ಮೇ20(DaijiworldNews/AZM):ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಬಿಜೆಪಿ ತನ್ನ ಖಾತೆ ತೆರೆಯಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿವೆ.
ಬಿಜೆಪಿ ಸ್ಥಾಪನೆಯಾಗಿ 3 ದಶಕಗಳು ಕಳೆದಿದ್ದರೂ, ಕೇರಳದಲ್ಲಿ ಒಮ್ಮೆಯೂ ಆ ಪಕ್ಷ ಲೋಕಸಭೆ ಚುನಾವಣೆ ಗೆದ್ದಿಲ್ಲ. 2014ರ ಲೋಕಸಭೆ ಚುನಾವಣೆಯಲ್ಲಿ ತಿರುವನಂತಪುರ ಕ್ಷೇತ್ರದಿಂದ ಕಾಂಗ್ರೆಸ್ಸಿನ ಶಶಿ ತರೂರ್ ವಿರುದ್ಧ ಸ್ಪರ್ಧಿಸಿದ್ದ ಒ. ರಾಜಗೋಪಾಲ್ ಅವರು ಕೇವಲ 15 ಸಾವಿರ ಮತಗಳ ಅಂತರದಿಂದ ಸೋಲುಂಡಿದ್ದರು. ಈ ಬಾರಿ ತಿರುವನಂತಪುರ ಮೂಲಕವೇ ಬಿಜೆಪಿ ಕೇರಳದಲ್ಲಿ ಖಾತೆ ತೆರೆಯಲಿದೆ ಎಂದು ಹೇಳಲಾಗುತ್ತಿದೆ.
ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಕುಮ್ಮನಮ್ ರಾಜಶೇಖರನ್ ಅವರಿಂದ ಮಿಜೋರಂ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ಕೊಡಿಸಿ ಬಿಜೆಪಿ ಕೇರಳಕ್ಕೆ ಕರೆಸಿತ್ತು. ಅವರನ್ನೇ ತಿರುವನಂತಪುರದಲ್ಲಿ ಅಭ್ಯರ್ಥಿ ಮಾಡಿತ್ತು. ಕುಮ್ಮನಮ್ ಅವರು ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.
ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ್ದ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಬಿಜೆಪಿ ಸಾಕಷ್ಟುಹೋರಾಟ ನಡೆಸಿದ್ದರೂ, ಅದರಿಂದ ಹೆಚ್ಚಿನ ಲಾಭವಾದಂತೆ ಇಲ್ಲ ಎಂದು ಸಮೀಕ್ಷೆಗಳನ್ನು ನೋಡಿದರೆ ತಿಳಿಯುತ್ತದೆ.