ನವದೆಹಲಿ,ಮೇ20(DaijiworldNews/AZM):,ರಾಜ್ಯದಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಚುನಾವಣೆ ಎದುರಿಸಿದ್ದರೆ ಉತ್ತಮ ಅವಕಾಶದೊರಕುತ್ತಿತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಹುಲ್ ಗಾಂಧಿ ಎದುರು ಹೇಳಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ ಪಕ್ಷದೊಂದಿಗೆ ಮಾಡಿಕೊಂಡಿರುವ ಚುನಾವಣಾ ಪೂರ್ವ ಮೈತ್ರಿಯಿಂದ ಕಾಂಗ್ರೆಸ್ಗೆ ಯಾವುದೇ ರೀತಿಯ ಲಾಭವೂ ಆಗಿಲ್ಲ ಎಂದಿರುವ ಸಿದ್ದರಾಮಯ್ಯನವರು
ಮೈತ್ರಿ ಬದಲಿಗೆ ಸ್ವತಂತ್ರವಾಗಿ ಸ್ಪರ್ಧಿಸಿದ್ದರೆ ಹೆಚ್ಚು ಸ್ಥಾನ ಗಳಿಸಬಹುದಿತ್ತು ಎಂದು ಹೇಳಿದ್ದಾರೆ. ಜೆಡಿಎಸ್ ಪ್ರಾಬಲ್ಯವಿರುವ ಕಡೆ ಜೆಡಿಎಸ್ಗೆ ನೇರ ಪೈಪೋಟಿ ಇರುವುದು ಕಾಂಗ್ರೆಸ್ನಿಂದ ಮಾತ್ರ. ಇಂತಹ ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಟ್ಟುಕೊಟ್ಟು ಕಾಂಗ್ರೆಸ್ನ ತಳಮಟ್ಟದ ಸಂಘಟನೆಗೆ ಹಾನಿ ಮಾಡಿಕೊಂಡಂತಾಗಿದೆ. ದಶಕಗಳ ಕಾಲ ಕಾಂಗ್ರೆಸ್ ಕಾರ್ಯಕರ್ತರು ಹೋರಾಟ ನಡೆಸಿರುವ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡುವಂತೆ ಪಕ್ಷ ಅವರಿಗೆ ತಾಕೀತು ಮಾಡಿದೆ. ಇದರಿಂದ ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗಿ ಪಕ್ಷಕ್ಕೆ ನಷ್ಟಉಂಟಾಗಿದೆ. ಇಂತಹ ಕಡೆ ಬಿಜೆಪಿ ಪರ್ಯಾಯವಾಗಿ ರೂಪುಗೊಳ್ಳಲು ನಾವೇ ನೆರವು ಮಾಡಿಕೊಟ್ಟಂತಾಗಿದೆ. ಇಂತಹ ಹಲವು ಸಮಸ್ಯೆಗಳು ಮೈತ್ರಿಯಿಂದ ಸೃಷ್ಟಿಯಾಗಿವೆ ಎಂದು ಸಿದ್ದರಾಮಯ್ಯನವರು ರಾಹುಲ್ ಗಾಂಧಿ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.
ಇದಕ್ಕೆ ರಾಹುಲ್ ಗಾಂಧಿ ತದ್ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕೆಲವು ಕಡೆ ಹೊಂದಾಣಿಕೆ ಸಮಸ್ಯೆಗಳು ಆಗಿರಬಹುದು. ಆದರೆ ಬಹುತೇಕ ಕ್ಷೇತ್ರಗಳಲ್ಲಿ ಇದು ಕಾಂಗ್ರೆಸ್ಗೆ ನೆರವಾಗಿರಬಹುದು. ಸಮಸ್ಯೆ ಆಗಿದೆ ಅಥವಾ ಲಾಭ ಆಗಿದೆ ಎಂಬ ಬಗ್ಗೆ ಮೇ 23ರ ಬಳಿಕ ಚರ್ಚೆ ಮಾಡುವುದು ಒಳಿತು ಎಂದು ಹೇಳಿ ಈ ಬಗೆಗಿನ ಚರ್ಚೆ ಮುಂದೂಡಿದರು ಎನ್ನಲಾಗಿದೆ.