ಬೆಂಗಳೂರು,ಮೇ 20 (Daijiworld News/MSP): ರಾಜ್ಯದಲ್ಲಿ ಮೋದಿ ಅಲೆ ಪ್ರಬಲವಾಗಿದೆ ಎಂಬ ಮಾತಿಗೆ ದೇಶದ ಎಲ್ಲಾ ಸುದ್ದಿ ಸಂಸ್ಥೆಗಳು ನಡೆಸಿದ ಮತದಾನೋತ್ತರ ಸಮೀಕ್ಷೆಯಲ್ಲಿ ಪುಷ್ಟಿ ನೀಡಿವೆ. ರಾಷ್ಟ್ರೀಯ ಸುದ್ದಿವಾಹಿನಿಗಳು , ಸಮೀಕ್ಷಾ ಸಂಸ್ಥೆಗಳು ಪ್ರತ್ಯೇಕ ಅಥವಾ ಸಹಭಾಗಿತ್ವದಲ್ಲಿ ನಡೆದ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಕನಿಷ್ಟ 15 ಹಾಗೂ ಗರಿಷ್ಟ 25 ಸ್ಥಾನ ಗೆಲ್ಲಬಹುದು ಎಂದಿವೆ.
ಇನ್ನು ಜೆಡಿಎಸ್ - ಕಾಂಗ್ರೆಸ್ ಮೈತ್ರಿಗೆ ರಾಜ್ಯದಲ್ಲಿ ನಿರೀಕ್ಷೆಗಿಂತಲೂ ಕಡಿಮೆ ಅಂದರೆ ಕನಿಷ್ಠ 2 ಸ್ಥಾನ ಗೆಲ್ಲಬಹುದು ಗರಿಷ್ಟ ಅಂದರೆ 13 ರವರೆಗೂ ಏರಬಹುದೆಂದು ತಿಳಿಸಲಾಗಿದೆ. ವಿಶೇಷ ಎಂದರೆ ಮಂಡ್ಯದಲ್ಲಿ ನಿಖಿಲ್ ಕುಮಾರ್ ಸ್ವಾಮಿಯ ವಿಜಯದ ಸಾಧ್ಯತೆಗಳನ್ನು ಸಮೀಕ್ಷೆಗಳು ಹೇಳಿವೆ.
ಇನ್ನು ಈಗ ಹೊರಬಿದ್ದಿರುವ ಹತ್ತಕ್ಕೂ ಹೆಚ್ಚು ಸಂಸ್ಥೆಗಳು ನಡೆಸಿರುವ ಮತದಾನೋತ್ತರ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಮೈತ್ರಿ ಪಕ್ಷಗಳ ಜಂಟಿ ಹೋರಾಟಕ್ಕೆ ಸಂಪೂರ್ಣ ಹೊರಬಂದಂತಾಗಿದೆ. ಯಾವ ಸಂಸ್ಥೆಯ ಸಮೀಕ್ಷೆಯಲ್ಲೂ ಜೆಡಿಎಸ್ ಮೂರು ಸ್ಥಾನಗಳನ್ನು ದಾಟುವುದಿಲ್ಲ ಎಂದು ತಿಳಿಸಿರುವುದು ಮೈತ್ರಿ ನಾಯಕರ ತಲೆಬಿಸಿಯಾಗುವಂತೆ ಮಾಡಿದೆ.
ಚುನಾವಣೋತ್ತರ ಸಮೀಕ್ಷಾ ಫಲಿತಾಂಶ ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ಪತನಗೊಳಿಸಲು ತೆರೆಮರೆಯಲ್ಲಿ ಬಿಜೆಪಿ ನಡೆಸಲು ಮುಂದಾಗಿರುವ ಆಪರೇಷನ್ ಕಮಲಕ್ಕೆ ಪುಷ್ಟಿ ಸಿಕ್ಕಂತಾಗಿದೆ.
ಚುನಾವಣೆಯ ಫಲಿತಾಂಶ ನೋಡಿಕೊಂಡು ತಮ್ಮ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿರುವ ಅನೇಕ ಶಾಸಕರು ಈ ಸಮೀಕ್ಷಾ ಫಲಿತಾಂಶದಂತೆ ಮೇ ೨೩ ರ ಫಲಿತಾಂಶವೂ ಹೊರಬಂದರೆ ರಾಜ್ಯದಲ್ಲಿ ಬಿಜೆಪಿ ಕಡೆಗೆ ಮುಖ ಮಾಡಿರುವ ಮೈತ್ರಿ ಪಕ್ಷಗಳ ಶಾಸಕರು ಯಾವುದೇ ಆತಂಕವಿಲ್ಲದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಮಲಪಾಳಯ ಸೇರುವ ಸಾಧ್ಯತೆ ಇದೆ.